ನವದೆಹಲಿ, ಡಿ.26-ದೆಹಲಿಯಲ್ಲಿ ಇಂದು ನಸುಕಿನಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ ಸಂಭವಿಸಿದ್ದು, 40 ಮಂದಿ ಪಾಣಾಪಾಯದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ.
ಕೃಷ್ಣ ನಗರ್ ಪ್ರದೇಶದ ನಾಲ್ಕು ಮಹಡಿಗಳ ನೆಲ ಅಂತಸ್ತಿನಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಉಗ್ರಾಣದಲ್ಲಿ ಇಂದು 2ರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡವನ್ನು ವ್ಯಾಪಿಸಲು ಆರಂಭಿಸಿತು.
2.10ರಲ್ಲಿ ಸುದ್ದಿ ತಿಳಿದ ಕೂಡಲೇ ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಮತ್ತಷ್ಟು ವ್ಯಾಪಿಸಿತು. ಮೆಟ್ಟಿಲು ಮಾರ್ಗದಲ್ಲಿ ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ನಿವಾಸಿಗಳು ಕೆಳಗೆ ಇಳಿದು ಹೋಗಲು ಸಾಧ್ಯವಾಗದೇ ಕಟ್ಡಡದ ತಾರಸಿ ಮೇಲೆ ಆಶ್ರಯ ಪಡೆದಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ಕಡ್ಡಡದ ಮೇಲ್ಬಾಗದಲ್ಲಿದ್ದ ಎಲ್ಲ 40 ಜನರನ್ನು ರಕ್ಷಿಸಿದರು ನಂತರ 4ರ ನಸುಕಿನಲ್ಲಿ ಅಗ್ನಿ ಜ್ವಾಲೆಗಳನ್ನು ನಂದಿಸಲಾಯಿತು ಎಂದು ಉನ್ನತಾಧಿಕಾರಿ ಅತುಲ್ ಗರ್ಗ್ ತಿಳಿಸಿದ್ದಾರೆ.
ಇದು ರಾಜಧಾನಿ ದೆಹಲಿಯಲ್ಲಿ ಕಳೆದ ಮೂರು ವಾರಗಳಲ್ಲಿ ಸಂಭವಿಸಿದ ಆರನೇ ಬೆಂಕಿ ದುರ್ಘಟನೆಯಾಗಿದೆ. ಡಿ.8ರಂದು ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿನ ನಾಲ್ಕು ಅಂತಸ್ತುಗಳ ಕಟ್ಟಡದಲ್ಲಿ ಬೆಂಕಿ ಸಂಭವಿಸಿ, 43 ಮಂದಿ ಹತರಾಗಿದ್ದರು.
ಅದಾದ ನಂತರ ಕೆಲವೆಡೆ ಮತ್ತೆ ಅಗ್ನಿ ಆಕಷ್ಮಿಕಗಳು ಸಂಭವಿಸಿತ್ತು. ಮೊನ್ನೆ ದೆಹಲಿಯ ಕಿರಾರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಮಕ್ಕಳೂ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟಿದ್ದರು.