ಗಲಭೆ ನಡೆಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ- ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಡಿ.25- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಡೆಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ. ಈಗಾಗಲೇ ಈ ಸಂಬಂಧ ಪೋಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.

ಪ್ರತಿಭಟನೆ ನಡೆಸಲೇಬಾರದೆಂದು ಪೋಲೀಸರು ನಿಷೇಧಾಜ್ಞೆ ವಿಧಿಸಿದ್ದರು. ಆದರೂ ಅದನ್ನು ಉಲ್ಲಂಘಿಸಿ ಹಿಂಸಾಚಾರ ನಡೆಸಲಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತರ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಪಿತೂರಿ ಹಿಂದೆ ಯಾರಿದ್ದಾರೆ? ಇವರಿಗೆ ಕುಮ್ಮಕು ನೀಡಿದವರು ಯಾರು? ಪೋಲೀಸ್ ಠಾಣೆಗೆ ಬೆಂಕಿ ಹಚ್ಚಲು ಕಾರಣವಾದರೂ ಏನು? ಟೆಂಪೋದಲ್ಲಿ ಕಲ್ಲು ತಂದವರು ಎಲ್ಲಿಂದ ಬಂದಿದ್ದರು ಎಂಬಿತ್ಯಾದಿಗಳ ಬಗ್ಗೆ ಇಂಚಿಂಚು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಎಲ್ಲೇ ಇದ್ದರೂ ಅವರನ್ನು ಬಂಧಿಸಿ ಕಾನೂನಿನ ಪ್ರಕಾರವೇ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರತಿದಿನ ಜನರಲ್ಲಿ ಗೊಂದಲ ಸೃಷ್ಟಿಸಿ ವಿಷಬೀಜ ಬಿತ್ತುತ್ತಿದ್ದಾರೆ.

ಕೂಡಲೇ ಎರಡೂ ಪಕ್ಷಗಳ ನಾಯಕರು ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು. ಕರಾವಳಿಯಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಬಿಎಸ್‍ವೈ ಎಚ್ಚರಿಕೆ ನೀಡಿದರು.

ಕರಾವಳಿಯಲ್ಲಿ ನಡೆದಿರುವ ಘಟನೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಕಾರಣ ಎಂದು ದಿನೇಶ್ ಗುಂಡೂರಾವ್ ಆರೋಪ ಕುರಿತಂತೆ ತಲೆ ಸರಿ ಇಲ್ಲದವರು ಮಾತ್ರ ಈ ರೀತಿ ಮಾತನಾಡಬಹುದು. ಮೊದಲೇ ಅವರಿಗೆ ಮಾಡಲು ಏನು ಕೆಲಸವಿಲ್ಲ. ಇಂತಹ ಅಸಂಬಂಧ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ.

ಪೋಲೀಸರು ಬಿಡುಗಡೆ ಮಾಡಿರುವ ವಿಡಿಯೋಗಳನ್ನು ನೋಡಿಯಾದರೂ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಲಿ. ಎಲ್ಲದರಲ್ಲೂ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ