ರಾಜ್ಯ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅವರ ನಾಯಕತ್ವ ಅಗತ್ಯ-ಸಿದ್ದರಾಮಯ್ಯ ಪರ ಕಾಂಗ್ರೆಸ್‍ನ ಯುವ ನಾಯಕರ ಬ್ಯಾಟಿಂಗ್

ಬೆಂಗಳೂರು,ಡಿ.25- ಪ್ರತಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಬೇಕು ಎಂದು ಕಾಂಗ್ರೆಸ್‍ನ ಯುವ ನಾಯಕರ ನಿಯೋಗ ಹೈಕಮಾಂಡ್ ಮೇಲೆ ಒತ್ತಡ ಹೇರಿದೆ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್ ದೆಹಲಿಯ ರಾಜ್‍ಘಾಟ್‍ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ ಶಾಸಕರಾದ ಕೃಷ್ಣಬೈರೇಗೌಡ, ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರಾದ ವಿಜಯ್ ಸಿಂಗ್ ಹಾಗೂ ಮತ್ತಿತರರು ಸಿದ್ದರಾಮಯ್ಯ ಅವರ ಪರವಾಗಿ ವರಿಷ್ಠ ನಾಯಕರ ಬಳಿ ಬ್ಯಾಟಿಂಗ್ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅವರ ನಾಯಕತ್ವ ಅಗತ್ಯವಾಗಿದೆ. ಅವರನ್ನು ಬಿಟ್ಟರೆ ಕಾಂಗ್ರೆಸ್‍ಗೆ ಹಿನ್ನಡೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಅಧಿಕಾರದಲ್ಲಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅನಗತ್ಯ ಕಿರುಕುಳಗಳಾಗುತ್ತಿವೆ. ಬಹಳಷ್ಟು ಮಂದಿ ಪಕ್ಷ ಬಿಟ್ಟು ಬಿಜೆಪಿಯತ್ತ ವಲಸೆ ಹೋಗುವ ಪರಿಸ್ಥಿತಿಯಿದೆ. ಸಿದ್ದರಾಮಯ್ಯ ಅವರಿಂದ ಮಾತ್ರ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ಸಾಧ್ಯ. ಇಲ್ಲವಾದರೆ ಪಕ್ಷವೇ ಖಾಲಿಯಾಗಲಿದೆ ಎಂಬ ಆತಂಕವನ್ನು ಯುವ ನಾಯಕರ ನಿಯೋಗ ಹೈಕಮಾಂಡ್ ನಾಯಕರ ಬಳಿ ತೊಡಿಕೊಂಡಿದೆ.

ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಧುಸೂದನ್ ಮಿಸ್ತ್ರಿ, ಮುಕುಲ್ ವಾಸ್ನಿಕ್, ಅಹಮದ್ ಪಟೇಲ್ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿರುವ ನಿಯೋಗ ಸಿದ್ದರಾಮಯ್ಯ ಅವರು ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಮನವೊಲಿಕೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯವರು ಖುದ್ದಾಗಿ ಮಾತನಾಡಬೇಕು. ಇಲ್ಲವಾದರೆ ಸಿದ್ದರಾಮಯ್ಯ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಿದ್ದರಾಮಯ್ಯ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿ ಬಂದಿವೆ. ಬಿಜೆಪಿ ನಾಯಕರ ಜೊತೆ ನಿಕಟ ಸಂಬಂಧ ಹೊಂದಿರುವ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರೆದರೆ ಕಾಂಗ್ರೆಸ್‍ಗೆ ಲಾಭವಾಗುವುದಿಲ್ಲ ಎಂದು ಕೆಲ ಹಿರಿಯ ನಾಯಕರು ದೂರು ನೀಡಿದ್ದಾರೆ ಎಂದು ಹೈಕಮಾಂಡ್ ವರಿಷ್ಠರು ನಿಯೋಗವನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುಕ್ಕೂ ಕೋಮುವಾದದ ವಿರುದ್ಧ ಹೋರಾಟ ನಡೆಸಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾದಾಗ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಂದ ಮಾತ್ರಕ್ಕೆ ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಕಾಂಗ್ರೆಸ್‍ನ ಕೆಲ ನಾಯಕರು ದೂರು ನೀಡುವ ಮೂಲಕ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಯುವ ನಾಯಕರ ನಿಯೋಗ ತಮ್ಮ ಅಸಮಾದಾನ ವ್ಯಕ್ತ ಪಡಿಸಿದೆ.

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಸದ್ಯಕ್ಕೆ ಪ್ರಶ್ನಾತೀತ ನಾಯಕರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಎಐಸಿಸಿ ವಿಕ್ಷಕರು ಬೆಂಗಳೂರಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದಾಗ 40 ಮಂದಿ ಹಿರಿಯ ನಾಯಕರಲ್ಲಿ 32 ಮಂದಿ, 67 ಮಂದಿ ಶಾಸಕರಲ್ಲಿ 55 ಮಂದಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದರು. ಸರ್ಕಾರ ಪತನಗೊಂಡು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡ ಬಳಿಕವೂ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಅವರನ್ನೇ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ನಿಯೋಗ ಬಲವಾದ ಒತ್ತಡ ಹೇರಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೇ ನೇಮಿಸುವಂತೆಯೂ ಈ ನಿಯೋಗ ಹೈಕಮಾಂಡ್‍ಗೆ ಮನವಿ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ