ರಾಂಚಿ, ಡಿ.24- ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿಮೋರ್ಚಾ (ಜೆಎಂಎಂ) ನೇತೃತ್ವದ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮೈತ್ರಿಕೂಟ ಗೆಲುವು ಸಾಧಿಸಿದ್ದು, ಇಂದು ಬೆಳಗ್ಗೆಯಿಂದಲೇ ರಾಜಧಾನಿ ರಾಂಚಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.
ಜೆಎಂಎಂ ಶಾಸಕಾಂಗ ಪಕ್ಷದ (ಜೆಎಂಎಂಎಲ್ಪಿ) ನೂತನ ನಾಯಕರಾಗಿ ಪಕ್ಷದ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಆಯ್ಕೆಯಾಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಕ್ಕೆ ವೇದಿಕೆ ಸಜ್ಜಾಗಿದೆ.
ಇಂದು ಮಧ್ಯಾಹ್ನ ರಾಜಧಾನಿಯಲ್ಲಿ ಜೆಎಂಎಂನ ನೂತನ ಶಾಸಕರ ಸಭೆ ನಡೆಯಿತು. ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಮಂತ್ ಸೊರೇನ್ ಅವರನ್ನು ಜೆಎಂಎಂಎಲ್ಪಿ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಹೇಮಂತ್ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಜೀವ್ಗಾಂಧಿ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಚರ್ಚಿಸಲಿದ್ದಾರೆ. ಆ ಬಳಿಕ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ.
ಇತ್ತ ರಾಂಚಿಯಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆದು ಮೈತ್ರಿಕೂಟ ಸರ್ಕಾರ ರಚನೆ ಸಂಬಂಧ ನೂತನ ಚುನಾಯಿತ ಪ್ರತಿನಿಧಿಗಳು ಸಮಾಲೋಚನೆ ನಡೆಸಿದರು.
81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಜೆಎಂಎಂ-ಕಾಂಗ್ರೆಸ್- ಆರ್ಜೆಡಿ- ಮಹಾಮೈತ್ರಿ 47 ಸ್ಥಾನಗಳನ್ನು ಗಳಿಸಿದೆ (ಜೆಎಂಎಂ-30, ಕಾಂಗ್ರೆಸ್-16 ಮತ್ತು ಆರ್ಜೆಡಿ-1).
ಎರಡನೆ ಬಾರಿ ಅಧಿಕಾರ ಗದ್ದುಗೆ ಏರುವ ಮಹತ್ವಾಕಾಂಕ್ಷೆ ಹೊಂದಿದ್ದ ಮುಖ್ಯಮಂತ್ರಿ ರಘುವರ್ದಾಸ್ ನೇತೃತ್ವದ ಬಿಜೆಪಿ 25 ಸ್ಥಾನಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಎಜೆಎಸ್ಯು-2, ಜಾರ್ಖಂಡ್ ವಿಕಾಸ ಮೋರ್ಚಾ (ಪ್ರಜಾತಾಂತ್ರಿಕ್)-3 ಹಾಗೂ ಇತರರು 4 ಸ್ಥಾನಗಳನ್ನು ಗೆದ್ದಿದ್ದಾರೆ.