ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ- ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ

ನವದೆಹಲಿ/ಮುಂಬೈ/ಕೋಲ್ಕತಾ, ಡಿ.24-ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಭುಗಿಲೇಳದಂತೆ ನಿಗ್ರಹಿಸಲು ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ವ್ಯಾಪಕ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕೇಂದ್ರದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ವಿರುದ್ಧ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದು, ಹೋರಾಟ ಮುಂದುವರಿದಿದೆ. ಕ್ರಿಸ್ಮಸ್ ಸಂದರ್ಭದಲ್ಲೇ ಸಿಎಎ ಪ್ರತಿಭಟನೆ ಹಿಂಸಾರೂಪ ಪಡೆದು ಅಲ್ಪಸಂಖ್ಯಾತ ಕ್ರೈಸ್ತರನ್ನು ಗುರಿಯಾಗಿಟ್ಟುಕೊಂಡು ಕೆಲವು ದುಷ್ಕರ್ಮಿಗಳು ದಾಳಿ ಮಾಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್‍ನಿಂದ ಹೊಸ ವರ್ಷದವರೆಗೂ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಪ್ರತಿಭಟನೆ ಸೋಗಿನಲ್ಲಿ ಸಮಾಜದಲ್ಲಿ ಶಾಂತಿ ಕದಡುವ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಮುಖ್ಯವಾಗಿ ದೆಹಲಿ, ಮುಂಬೈ, ಕೋಲ್ಕತಾ, ಗೋವಾ, ಲಕ್ನೋ ಮತ್ತು ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಈಶಾನ್ಯ ಪ್ರಾಂತ್ಯಗಳ ಪ್ರಮುಖ ನಗರಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.

ಪೋಲೀಸರು, ಅರೆ ಸೇನಾ ಪಡೆ, ಗಲಭೆ ನಿಯಂತ್ರಣ ದಳ, ಎನ್‍ಎಸ್‍ಜಿ ಕಮ್ಯಾಂಡೋಗಳು ಸೇರಿದಂತೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು, ಡ್ರೋಣ್‍ಗಳು ಮತ್ತು ಇತರ ತಂತ್ರಜ್ಞಾನಗಳನ್ನು ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲು ಬಳಸಲಾಗುತ್ತಿದೆ.

ಕ್ರಿಸ್ಮಸ್‍ನಿಂದ ಹೊಸ ವರ್ಷದವರೆಗೆ ದೇಶದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ