ಬೆಂಗಳೂರು, ಡಿ.24- ಮತ್ತು ಬರಿಸುವ ಮಾರಕವಾದ ಮಾದಕ ವಸ್ತುಗಳನ್ನು ವಿದೇಶದಿಂದ ಆನ್ಲೈನ್ ಮೂಲಕ ತರಿಸಿ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಮತ್ತೊಂದು ಜಾಲವನ್ನು ಭೇದಿಸಿರುವ ಸಿಸಿಬಿ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರಾಜಸ್ಥಾನ ಮೂಲದ ತುಷಾರ್ಜೈನ್ (20), ಶಾಕಿದ್ಖಾನ್ (21) ಎಂದು ಗುರುತಿಸಲಾಗಿದೆ.
ತುಷಾರ್ಜೈನ್ ನಗರದ ಟ್ಯಾನರಿ ರಸ್ತೆಯ ಬಸಪ್ಪ ಲೇನ್ನಲ್ಲಿ ವಾಸವಿದ್ದು, ಪ್ರಥಮ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ.
ಶಾಕಿದ್ಖಾನ್ ಬಿಬಿಎಂ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ದುಡ್ಡಿನ ಆಸೆಗಾಗಿ ಮಾದಕ ವಸ್ತು ವ್ಯಾಪಾರಕ್ಕೆ ಕೈ ಹಾಕಿದ್ದಾನೆ.
ಈ ಇಬ್ಬರು ಆರೋಪಿಗಳು ಟಾರ್ ಬ್ರೌಜರ್ ಬಳಸಿ ಡ್ರೀಮ್ ಮಾರ್ಕೆಟ್ ಅಂತರ್ಜಾಲದಲ್ಲಿ ಡಾರ್ಕ್ವೆಬ್ ಮೂಲಕ ನೆದರ್ಲೆಂಡ್ನ ಮಾದಕ ವಸ್ತು ಸರಬರಾಜುದಾರರನ್ನು ಸಂಪರ್ಕಿಸಿದ್ದು, ಅವರಿಂದ ಮೀಥೈಲ್ ಎನ್ಡಿಯಾಕ್ಸಿ ಮೆಥಾಂಫೆಟಮೈನ್ (ಎಂಡಿಎಂಎ), ಎಲ್ಎಸ್ಬಿ ಮಾತ್ರೆಗಳು ಹಾಗೂ ಭಾವೋತ್ಕರ್ಷಕ್ಕೆ ಕಾರಣವಾಗುವ ಎಕ್ಸ್ಟೆಸಿ ಮಾತ್ರೆಗಳನ್ನು ಆನ್ಲೈನ್ ಮೂಲಕವೇ ಆಮದು ಮಾಡಿಕೊಳ್ಳುತ್ತಿದ್ದರು.
ಬಿಟ್ಕಾಯಿನ್ ಮುಖಾಂತರ ವಿದೇಶದ ಮಾದಕ ವಸ್ತು ಸರಬರಾಜುದಾರರಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ನೆದರ್ಲೆಂಡ್ನಿಂದ ಆಮದು ಮಾಡಿಕೊಂಡ ಅಪಾಯಕಾರಿಯಾದ ಈ ಮಾದಕ ಔಷಧಿಗಳನ್ನು ರಾಜ್ಯಾದ್ಯಂತ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಖಚಿತ ಮಾಹಿತಿ ಪಡೆದ ಮಾದಕ ದ್ರವ್ಯ ನಿಗ್ರಹ ದಳದ ಪೋಲೀಸರು ತುಷಾರ್ಜೈನ್ಗೆ ಸೇರಿದ್ದ ಟ್ಯಾನರಿ ರಸ್ತೆಯ ಗೋಡೌನ್ ಮೇಲೆ ದಾಳಿ ಮಾಡಿ 80 ಗ್ರಾಂ ಎಂಡಿಎಂಎ, 43 ಎಲ್ಎಸ್ಬಿ ಸ್ಟ್ರಿಪ್ಸ್, 150 ವಿವಿಧ ಬಣ್ಣದ ಎಕ್ಸ್ಟೆಸಿ ಮಾತ್ರೆಗಳು, 2 ಮೊಬೈಲ್ ಪೋನ್, ಎಲೆಕ್ಟ್ರಾನಿಕ್ ತೂಕದ ಯಂತ್ರ, ಮಾದಕ ವಸ್ತುವಿನ ಪ್ಯೂರಿಟಿ ಪರಿಶೀಲಿಸುವ ಕಿಟ್, 26 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ 10 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಮೂರನೆ ಪ್ರಕರಣ ಇದಾಗಿದ್ದು, ಅಂತಾರಾಷ್ಟ್ರೀಯ ಮಾದಕ ವಸ್ತುಜಾಲಕ್ಕೆ ಬೆಂಗಳೂರು ಮಾರುಕಟ್ಟೆಯಾಗಿ ಪರಿಣಮಿಸಿದೆಯೇ ಎಂಬ ಆತಂಕ ಕಾಡಲಾರಂಭಿಸಿದೆ.
ಕಳೆದ ನ.29ರಂದು ಸಿಸಿಬಿ ಪೋಲೀಸರು ಕೋಲ್ಕತ್ತಾ ಮೂಲದ ಆಸ್ಟಿಫ್ ಸಲೀಂ ಎಂಬಾತನನ್ನು ಬಂಧಿಸಿ ಆತ ಕೆನಡಾದಿಂದ ಹಾಲಿನ ಡಬ್ಬಗಳ ಮೂಲಕ ಮರಿಜೋನಾ ಎಂಬ ದುಬಾರಿ ಬೆಲೆಯ ಹೈಡ್ರೋಗಾಂಜಾವನ್ನು ತರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದರು. ಆತ ಕೂಡ ವಿದೇಶದಿಂದ ನಾನಾ ಬಗೆಯ ಮಾದಕ ವಸ್ತುಗಳನ್ನು ಆನ್ಲೈನ್ ಮೂಲಕ ತರಿಸುತ್ತಿದ್ದ.
ಡಿ.13ರಂದು ಅಮಾಥ್ಯ, ಆದಿತ್ಯ, ಮಂಗಲ್ಮುಖಿಯಾ ಎಂಬ ಆರೋಪಿಗಳನ್ನು ಬಂಧಿಸಿದ್ದ ಪೋಲೀಸರು ನೆದರ್ಲ್ಯಾಂಡ್ನಿಂದ ಅಪಾಯಕಾರಿಯಾದ ಮಾದಕ ವಸ್ತುಗಳನ್ನು ತರಿಸುತ್ತಿರುವ ಜಾಲ ಭೇದಿಸಿದರು.
ಟಾರ್ ಎಂಬ ವೆಬ್ ಬ್ರೌಜರ್ ಬಳಸಿ ಡಾರ್ಕ್ಮಾರ್ಕೆಟ್ ಸಂಪರ್ಕ ಸಾಧಿಸಿ ಕೆನಡಾ, ನೆದರ್ಲ್ಯಾಂಡ್ ಹಾಗೂ ಇತರ ದೇಶಗಳಿಂದ ಮಾದಕ ವಸ್ತುಗಳನ್ನು ಸುಲಭವಾಗಿ ಬೆಂಗಳೂರಿಗೆ ತರಿಸಿಕೊಂಡು ಇಲ್ಲಿ ಮಾರಾಟ ಮಾಡಿ ಕೋಟ್ಯಂತರ ರೂ. ಲಾಭ ಮಾಡಿಕೊಳ್ಳುತ್ತಿರುವ ಆರೋಪಿಗಳು ದಿನೇ ದಿನೇ ಬೆಳಕಿಗೆ ಬರುತ್ತಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಬಹುತೇಕ 25 ವರ್ಷದೊಳಗಿನ ಯುವ ಜನತೆ ಎಂಬುದು ಮತ್ತಷ್ಟು ಆತಂಕಕಾರಿ. ಕಾಲೇಜು ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಮಾದಕ ವಸ್ತು ವ್ಯಾಪಾರ ದಂಧೆಗೆ ಇಳಿಯುತ್ತಿರುವ ಈ ರೀತಿಯ ಆಸಾಮಿಗಳನ್ನು ಮಟ್ಟ ಹಾಕಲು ಪೋಲೀಸರು ಹರಸಾಹಸ ಪಡುತ್ತಿದ್ದಾರೆ.
ಆದರೂ ನಾಯಿಕೊಡೆಗಳಂತೆ ಈ ರೀತಿಯ ಜಾಲಗಳು ಬೆಳೆಯುತ್ತಲೇ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.