ಬೆಂಗಳೂರು,ಡಿ.24- ಕಳೆದ ವಾರ ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಪೂರ್ವನಿಯೋಜಿತ ಎಂಬುದು ಸಾಬೀತಾಗಿದ್ದು, ಇದಕ್ಕೆ ಎಸ್ಡಿಪಿಐ, ಪಿಎಫ್ಐ ಹಾಗೂ ಕಾಂಗ್ರೆಸ್ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಲಭೆಗೆ ಕುಮ್ಮಕ್ಕು ನೀಡಿದವರು ಯಾರು? ಪೋಲೀಸರ ಮೇಲೆ ಕಲ್ಲೆಸೆದವರು ಎಲ್ಲಿನವರು? ಇವರ ಉದ್ದೇಶವಾದರೂ ಏನು? ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಎಸ್ಡಿಪಿಐ, ಪಿಎಫ್ಐ ಹಾಗೂ ಕಾಂಗ್ರೆಸ್ ಇದರ ನೈತಿಕ ಹೊರೆಯನ್ನು ಹೊತ್ತುಕೊಳ್ಳಬೇಕೆಂದು ಅವರು ಒತ್ತಾಯ ಮಾಡಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಶ್ಮೀರದಲ್ಲಿ ಈ ಹಿಂದೆ ಸೈನಿಕರ ಮೇಲೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆಯುತ್ತಿದ್ದರು. ಈಗ ಅದೇ ಮಾದರಿಯಲ್ಲಿ ಮಂಗಳೂರಿನಲ್ಲೂ ಹೊರರಾಜ್ಯದವರು ಗಲಭೆ ನಡೆಸಿದ್ದಾರೆ ಎಂದು ದೂರಿದರು.
ಕೋಮುಗಲಭೆಗೆ ಪದೇ ಪದೇ ಕುಮ್ಮಕ್ಕು ನೀಡುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ದಾಂಧಲೆ ನಡೆಸಿದವರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದಾರೆ. ಇದಕ್ಕೆ ಅವರು ಈಗ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ಯು.ಟಿ.ಖಾದರ್ ಹೇಳಿದಾಗಲೇ ಗಲಭೆ ನಡೆಯುವ ಬಗ್ಗೆ ಅವರಿಗೆ ವಾಸನೆಯಿತ್ತು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕಾಯ್ದೆ ಅನುಷ್ಠಾನಗೊಂಡರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ ಎಂದು ಹೇಳಿದ ಮರುದಿನವೇ ಗಲಭೆ ನಡೆದಿದೆ. ಆದರೆ ಇದು ಪೂರ್ವ ನಿಯೋಜಿತ ಕೃತ್ಯವಲ್ಲದೆ ಎಂದು ಪ್ರಶ್ನಿಸಿದರು.
ಹೊರರಾಜ್ಯದಿಂದ ಬಂದು ಈ ಕೃತ್ಯ ನಡೆಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಸಿಸಿಟಿವಿಗಳನ್ನು ಮೊದಲೇ ಧ್ವಂಸಗೊಳಿಸಿದ್ದರ ಉದ್ದೇಶವನ್ನು ಎಲ್ಲರೂ ಅರಿಯಬೇಕು. ಪ್ರತಿಭಟನೆ ನಡೆಸುವ ಮುನ್ನ ನಗರ ಪೋಲೀಸ್ ಆಯುಕ್ತರು ಎಲ್ಲ ಸಂಘಟನೆಗಳ ಮುಖಂಡರನ್ನು ಕರೆಸಿ ಶಾಂತಿಸಭೆ ನಡೆಸಿದ್ದರು. ಅವರ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದು ಏಕೆ ಎಂದು ತರಾಟೆಗೆ ತೆಗೆದುಕೊಂಡರು.
ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಲಾಠಿ ಪ್ರಹಾರ ನಡೆಸಿದಾಗ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿದಾಗ ಸುಮ್ಮನೆ ಕೂರಲು ಸಾಧ್ಯವೇ? ಗೂಂಡಾಗಳು ಮತ್ತು ಸಮಾಜಘಾತುಕ ಶಕ್ತಿಗಳೇ ಇದರ ಹಿಂದಿದ್ದಾರೆ ಎಂದು ಕಟೀಲು ಹೇಳಿದರು.
ಕೇಂದ್ರ ಸಚಿವ ಸುರೇಶ್ಕುಮಾರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಕಟೀಲ್ ಸಾರ್ವಜನಿಕರ ಆಸ್ತಿಪಾಸ್ತಿ ಹಾಳು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅದನ್ನು ವಿವಾದ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಭಾವನೆಯಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.