ಪೌರತ್ವ ತಿದ್ದುಪಡಿ ಕಾಯ್ದೆ- ಮುಸಲ್ಮಾನರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ-ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು

ಬೆಂಗಳೂರು,ಡಿ.24-ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಮುಸಲ್ಮಾನರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಅಮಾಯಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು ದೂರಿದರು.

ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಜಾರಿಯಾಗುವುದರಿಂದ ಮುಸ್ಲಿಮರು ಸೇರಿದಂತೆ ದೇಶದ ಯಾವುದೇ ನಾಗರಿಕರಿಗೂ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಇನ್ನು ಪ್ರತಿಭಟನೆ ನಡೆಸುವವರಿಗೆ ಕಾಯ್ದೆಯ ಸದುದ್ದೇಶವೇ ಅರ್ಥವಾಗುತ್ತಿಲ್ಲ. ವಿನಾಕಾರಣ ಒಂದು ಸಮುದಾಯದ ವೋಟ್ ಬ್ಯಾಂಕ್ ಕೈತಪ್ಪಬಹುದೆಂಬ ಭೀತಿಯಿಂದ ಜನರಿಗೆ ಮಂಕುಬೂದಿ ಎರಚುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈಗ ನಮಗೆ ನೀತಿ ಪಾಠ ಮಾಡಲು ಮುಂದಾಗಿರುವವರು ತಮ್ಮ ಅಧಿಖಾರಾವಧಿಯಲ್ಲಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡ ಈ ಮಸೂದೆಯನ್ನು ಜಾರಿ ಮಾಡಿಲ್ಲ. ದೇಶ ವಾಸಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಬಹುತೇಕ ಮಂದಿ ವಿರೋಧಿಸದೆ ಒಪ್ಪಿಕೊಂಡಿದ್ದಾರೆ.

ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಕೇಂದ್ರದ ವಿರುದ್ಧ ಹೋರಾಟ ನಡೆಸಲು ಯಾವ ಅಸ್ತ್ರಗಳು ಇಲ್ಲ ಎಂಬ ಕಾರಣಕ್ಕಾಗಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ನಾನು ಮೂರು ಬಾರಿ ಸಂಸದನಾಗಿರುವುದಕ್ಕೆ ಹೆಮ್ಮೆಯಿದೆ. ಈ ಬಾರಿ ಜಮ್ಮುಕಾಶ್ಮೀರಕ್ಕೆ ನೀಡಲಾಗುತ್ತಿದ್ದ 370ನೇ ವಿಧಿ ರದ್ದುಪಡಿಸಿರುವುದು, ತಲಾಕ್ ರದ್ದತಿ, ಪೌರತ್ವ ಕಾಯ್ದೆ ಜಾರಿಗೆ ತರುವ ಸಂದರ್ಭದಲ್ಲಿ ನಾನು ಸಂಸದನಾಗಿರುವುದು ಸಾರ್ಥಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಯಾರ ವಿರೋಧಿಯೂ ಅಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭೆ ಸ್ಪೀಕರ್ ಅನೇಕರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡಿರುವುದು ಬಿಜೆಪಿ ಎಂದರು.

ಮಸೂದೆ ಒಂದು ಬಾರಿ ಪೌರತ್ವವನ್ನು ನೀಡಿದರೆ ಅದನ್ನು ಯಾರೊಬ್ಬರೂ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ದೇಶವೇ ಬಿದ್ದುಹೋಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅಧಿಕಾರ ಇಲ್ಲದೆ ಹಪಾಹಪಿ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ದೇಶದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.

ದೇಶದ ಯಾವುದೇ ನಾಗರಿಕರಿಗೂ ಈ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ ಎಂದು ಸ್ವತಃ ಪ್ರಧಾನಿಯವರೇ ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವು ದುಷ್ಟಶಕ್ತಿಗಳು ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ. ಇದಕ್ಕೆ ಬೇರೆಯವರು ಕುಮ್ಮಕು ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್, ಶಾಸಕ ಪಿ.ರಾಜು, ಹಿರಿಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ, ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ