ಬೆಂಗಳೂರು, ಡಿ.22-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಈವರೆಗೂ ನಡೆಯುತ್ತಿದ್ದ ಪ್ರತಿಭಟನೆಗೆ ಪ್ರತಿಯಾಗಿ ಇಂದು ನಗರದಲ್ಲಿ ಬೃಹತ್ ಸಮಾವೇಶ ನಡೆದಿದೆ. ವಿವಿಧ ಸಂಘಟನೆಗಳು ಟೌನ್ಹಾಲ್ ಬಳಿ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿವೆ.
ಇಂಡಿಯನ್ ಸಿಟಿಜನ್ ಫಾರ್ ಸಿಎಎ ಎಂಬ ಘೋಷವಾಕ್ಯದೊಂದಿಗೆ ಹಲವಾರು ಸಂಘಟನೆಗಳು ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆಗೆ ಬೆಂಬಲ ಸೂಚಿಸಿ ಮಸೂದೆಯಿಂದ ದೇಶದ ಯಾವುದೇ ನಾಗರಿಕರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳಿಗೆ ತಿರುಗೇಟು ಎಂಬಂತೆ ಪ್ರತಿಭಟನೆ ನಡೆಸಿದ ಇಂಡಿಯನ್ ಸಿಟಿಜನ್ ಫಾರ್ (ಸಿಎಎ) ಸಂಘಟನೆಯವರು ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಗೆ ಅಡ್ಡಿಪಡಿಸಬಾರದೆಂದು ಮನವಿ ಮಾಡಿದರು.
ಯಾವುದೋ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿ ಮಾಡಿಲ್ಲ. ಭಾರತದಲ್ಲಿ ಕಾನೂನು ಬಾಹಿರವಾಗಿ ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪ್ರತಿಪಕ್ಷಗಳು ಕೆಲವು ನಿರ್ದಿಷ್ಟ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದು ನೆಲೆಸಿರುವ ನುಸುಳುಕೋರರಿಗೆ ಕಡಿವಾಣ ಹಾಕುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದಿಂದ ಕಾಯ್ದೆಯನ್ನು ಜಾರಿ ಮಾಡಿದೆ. ಮುಸ್ಲಿಂರ ಮತಗಳು ಕೈತಪ್ಪುವ ಭೀತಿಯಿಂದಾಗಿ ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ರಾಜಕೀಯ ಷಡ್ಯಂತ್ರ ನಡೆಸುತ್ತಿವೆ ಎಂದು ದೂರಿದರು.
ಈ ಮಸೂದೆ ಯಾವುದೇ ನಿರ್ದಿಷ್ಟ ಸಮುದಾಯ ಇಲ್ಲವೆ, ಮತ್ಯಾರನ್ನೋ ಗುರಿಯಾಗಿಸಿಕೊಂಡು ಜಾರಿಗೊಳಿಸಿಲ್ಲ. ಅಸ್ಸೋಂ, ಪಶ್ಚಿಮಬಂಗಾಳ, ಈಶಾನ್ಯ ರಾಜ್ಯ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಮೂರು ರಾಷ್ಟ್ರಗಳಿಂದ ವಲಸೆ ಬಂದಿರುವವರು ದೇಶದ ಪೌರತ್ವವನ್ನು ಪಡೆದುಕೊಂಡಿದ್ದಾರೆ.
ದೇಶವಾಸಿಗಳಿಗೆ ಪೌರತ್ವ ಕೈತಪ್ಪಬಾರದೆಂಬ ಕಾರಣಕ್ಕಾಗಿ ಜಾರಿಗೊಳಿಸಲಾಗಿದೆ. ಈ ಕಾಯ್ದೆ ವಿರೋಧಿಸುವವರಿಗೆ ವಾಸ್ತವವಾಗಿ ಇದರಲ್ಲಿರುವ ಅಂಶಗಳೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನಕಲಿ ಜಾತ್ಯತೀತವಾದಿಗಳು ಅನಗತ್ಯವಾಗಿ ಕಾಯ್ದೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆ ಮತ್ತು ನಾಗರಿಕ ನೋಂದಣಿ ಎರಡೂ ಪ್ರತ್ಯೇಕವಾದವುಗಳು. ಇದರ ಅರಿವಿಲ್ಲದ ವಿಚಾರವಾದಿಗಳು ಕೂಡ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಟೀಕಾಪ್ರಹಾರ ನಡೆಸಿದರು.
ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕೇಂದ್ರ ಸರ್ಕಾರದ ಈ ಕಾಯ್ದೆ ದೇಶದ ಯಾವುದೇ ನಾಗರಿಕರಿಗೂ ತೊಂದರೆ ಉಂಟು ಮಾಡುವುದಿಲ್ಲ. ನಿಜವಾದ ದೇಶವಾಸಿಗಳಾಗಿದ್ದರೆ ಯಾರೊಬ್ಬರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಒಳನುಸುಳುಕೋರರನ್ನು ಹಿಮ್ಮೆಟ್ಟಿಸಿದರೆ ಪ್ರತಿಪಕ್ಷದವರು ಆತಂಕಪಡುವ ಅಗತ್ಯವಾದರೂ ಏನು ಎಂದು ಹೇಳಿದರು.
ಅಸ್ಸೋಂ, ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ನಾಗರಿಕರೆ ಇಂದು ಅಲ್ಪಸಂಖ್ಯಾತರಾಗಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ವಲಸಿಗರು ಬಹುಸಂಖ್ಯಾತರಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮನ್ನು ಕೋಮುವಾದಿಗಳು ಎಂದು ಟೀಕೆ ಮಾಡುತ್ತಾರೆ ಎಂದು ಸೂಲಿಬೆಲೆ ಹರಿಹಾಯ್ದರು.
ದೇಶಕ್ಕೆ ನಿಜವಾಗಿಯೂ ಆತಂಕವಿರುವುದು ಮೂಲಭೂತವಾದಿಗಳು ಮತ್ತು ನಕಲಿ ಜಾತ್ಯತೀತವಾದಿಗಳಿಂದ. ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಸಹಿಸದ ಕೆಲ ವರ್ಗದವರು ಜನತೆಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ದೇಶದ ಯಾವುದೇ ನಾಗರಿಕರಿಗೂ ಇದರಿಂದ ಕಿಂಚಿತ್ತು ತೊಂದರೆಯಾಗುವುದಿಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯಪ್ರೇರಿತ ಎಂದರು.
ಇನ್ನು ಟೌನ್ಹಾಲ್ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೋದಿ… ಮೋದಿ… ಎಂದು ಜೈಕಾರ ಹಾಕಿಘೋಷಣೆ ಕೂಗಿದರು. ಕೈಯಲ್ಲಿ ಕಾಯ್ದೆಗೆ ಬೆಂಬಲ ಸೂಚಿಸಿದ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.