ಪೌರತ್ವ ತಿದ್ದುಪಡಿ ಕಾಯ್ದೆ-ನಿಧಾನಕ್ಕೆ ರಾಜಕೀಯ ತಿರುವು ಪಡೆಯುತ್ತಿರುವ ಪ್ರತಿಭಟನೆ

ಬೆಂಗಳೂರು, ಡಿ.22-ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧವಾಗಿ ತನ್ನದೇ ಜನತೆಯ ಮೇಲೆ ದಬ್ಬಾಳಿಕೆ ಮಾಡುವ ಪ್ರಪಂಚದ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ನಿಧಾನಕ್ಕೆ ರಾಜಕೀಯ ತಿರುವು ಪಡೆಯುತ್ತಿದ್ದು, ಕಾಂಗ್ರೆಸ್ ಕೂಡ ನೇರವಾಗಿ ಅಖಾಡಕ್ಕಿಳಿದು ಪ್ರತಿಭಟನೆ ನಡೆಸಲು ಮುಂದಾಗಿದೆ.

ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿ ಹತ್ಯೆ ಮಾಡಿರುವ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿತ್ತು. ಆದರೆ ಮಂಗಳೂರಿಗೆ ತೆರಳಿ ಗೋಲಿಬಾರ್‍ನಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡ ಜಿಲ್ಲಾಡಳಿತ ಅವಕಾಶ ಕೊಟ್ಟಿರಲಿಲ್ಲ.

ಗೋಲಿಬಾರ್ ನಡೆದ ದಿನವೇ ಮಂಗಳೂರಿಗೆ ತೆರಳಿದ್ದ ಕಾಂಗ್ರೆಸ್ ನಿಯೋಗವನ್ನು ಪೋಲೀಸರು ಬಂಧಿಸಿದ ನಂತರ ವಾಪಸ್ ಕಳುಹಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳೂರಿಗೆ ತೆರಳಲು ಕಳೆದ ಮೂರು ದಿನಗಳಿಂದ ಪ್ರಯತ್ನಿಸಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಶತಾಯಗತಾಯ ನಾಳೆ ಮಂಗಳೂರಿಗೆ ಭೇಟಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದು, ವಿಶೇಷ ವಿಮಾನವನ್ನು ಕಾಯ್ದಿರಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪೌರತ್ವದ ಗಲಾಟೆ ತಣ್ಣಗಾಗಿದೆ. ಈಗ ಕಾಂಗ್ರೆಸ್ ನಿಧಾನವಾಗಿ ಧ್ವನಿ ಎತ್ತುತ್ತಿದ್ದು, ಪ್ರತಿಭಟನೆಯ ಹಾದಿ ಹಿಡಿದಿದೆ. ನಾಳೆ ನವದೆಹಲಿಯ ರಾಜ್‍ಘಾಟ್ ಬಳಿ ಎಐಸಿಸಿ ಬೃಹತ್ ಪ್ರತಿಭಟನೆ ಆಯೋಜಿಸಿದೆ.

ಹಂತ ಹಂತವಾಗಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಗಳು ಪಕ್ಷದ ವತಿಯಿಂದ ನಡೆಯಲಿವೆ. ಈವರೆಗೂ ಜನಸಾಮಾನ್ಯರ ಸ್ವಪ್ರೇರಣೆಯಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದ ಕಾಂಗ್ರೆಸ್, ತಾನೇ ಪ್ರತಿಭಟನೆಯ ನೇತೃತ್ವ ವಹಿಸುತ್ತಿರುವುದು ಪೌರತ್ವ ಕಾಯ್ದೆಯ ಕಾವು ಬೇರೆ ದಿಕ್ಕಿನತ್ತ ಸಾಗಲಿದೆ ಎಂಬ ಶಂಕೆ ಹುಟ್ಟುಹಾಕಿದೆ.

ಕೆಲವು ಕಡೆ ನಡೆದ ಪ್ರತಿಭಟನೆಯ ಹಿಂಸಾಚಾರದಲ್ಲಿ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ ಗೋಡ್ಸೆ ಅನುಯಾಯಿಗಳಾದವರು ಭಯೋತ್ಪಾದನೆ ಆರೋಪದಲ್ಲಿ ಜೈಲು ವಾಸ ಅನುಭವಿಸಿ ಬಿಜೆಪಿಯಿಂದ ಸಂಸದರೂ ಆಗುತ್ತಾರೆ.

ಕೋಮು ವಿಷಯ ಬಿತ್ತಿ ಪ್ರಚೋದನೆ ಮುಖಾಂತರ ಸೌಹಾರ್ದತೆ ಮತ್ತು ಸಾಮರಸ್ಯ ಹಾಳು ಮಾಡುವ ಬಿಜೆಪಿ ನಾಯಕರು ಶಾಸಕರು, ಮಂತ್ರಿಗಳಾಗುತ್ತಾರೆ. ತಾವೇ ಕಲ್ಲು ತೂರಿ , ಬೆಂಕಿ ಹಚ್ಚಿ ಉದ್ವಿಗ್ನ ಪರಿಸ್ಥಿತಿ ಉಂಟುಮಾಡುತ್ತಾರೆ ಎಂದು ಕಿಡಿಕಾರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ