ನವದೆಹಲಿ, ಡಿ.22-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅಧಿನಿಯಮದ ಬಗ್ಗೆ ಯಾವುದೇ ಆತಂಕ-ಗೊಂದಲಗಳಿಗೆ ಒಳಗಾಗುವ ಅಗತ್ಯವಿಲ್ಲ. ನಮ್ಮ ದೇಶವಾಸಿಗಳ ಪೌರತ್ವಕ್ಕೆ ಅಧಿಕೃತ ಮಾನ್ಯತೆ ನೀಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಇಂದು ದೆಹಲಿ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮೆಗಾ ರ್ಯಾಲಿಗೆ ಚಾಲನೆ ನೀಡಿ ಬೃಹತ್ ಜನಸ್ತೋಮ ಉದ್ದೇಶಿಸಿ ಮೋದಿ ಮಾತನಾಡಿದರು.
ರಾಜಧಾನಿ ದೆಹಲಿಯ 1,731 ಅನಧಿಕೃತ ಕಾಲೋನಿಗಳ 40 ಲಕ್ಷಕ್ಕೂ ಹೆಚ್ಚು ಜನರಿಗೆ ಸಕ್ರಮ ಹಕ್ಕುಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ಪೌರತ್ವ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಈ ಬೃಹತ್ ರ್ಯಾಲಿ ಬಿಜೆಪಿಯ ಶಕ್ತಿ ಪ್ರದರ್ಶನವೂ ಆಗಿತ್ತು.
ವಿರೋಧ ಪಕ್ಷಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ಮುಂದುವರಿಸಿದ ಅವರು, ಈ ಬಗ್ಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿನಾಕಾರಣ ಜನರ ದಿಕ್ಕು ತಪ್ಪಿಸಿ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿವೆ. ದೇಶದ ನಾಗರಿಕರ ಹಕ್ಕು ಮತ್ತು ಅವರ ಅಸ್ವಿತ್ವ ರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬದ್ಧ ಎಂದು ಪುನರುಚ್ಚರಿಸಿದರು.
ಈ ಕಾಯ್ದೆ ವಿರೋಧಿಸಿ ಈಶಾನ್ಯ ಪಾಂತ್ರ ಮತ್ತು ದೇಶದ ವಿವಿಧೆಡೆ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಮಯಸಾಧಕರ ಕುಮ್ಮಕ್ಕೇ ಕಾರಣ ಎಂದು ಅವರು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿರುವ ಮುಸ್ಲಿಮರು ಅನಗತ್ಯವಾಗಿ ಗೊಂದಲ ಮತ್ತು ಆತಂಕ್ಕೆ ಸಿಲುಕಿದ್ದಾರೆ. ಮುಸ್ಲಿಮರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ವರ್ಗಗಳ ಹಿತರಕ್ಷಣೆ ನಮ್ಮ ಅಧ್ಯತೆಯಾಗಿದೆ. ಪರಿಸ್ಥಿತಿಯ ದುರ್ಲಾಭ ಪಡೆದು ಕೆಲವು ದುಷ್ಟಶಕ್ತಿಗಳು ದೊಡ್ಡ ವಿವಾದ ಸೃಷ್ಟಿಸಿವೆ. ಈ ಕಾಯ್ದೆಯ ನೈಜ್ಯ ಸ್ವರೂಪವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ವಿನಾಕಾರಣ ಗೊಂದಲ ಮತ್ತು ಆತಂಕಕ್ಕೆ ಒಳಗಾಗಬಾರದು. ಶಾಂತಿ ಕಾಪಾಡಬೇಕು ಎಂದು ಮೋದಿ ಮನವಿ ಮಾಡಿದರು.
ಮೋದಿಯವರ ಈ ರ್ಯಾಲಿಯನ್ನು ದೆಹಲಿ ವಿಧಾನಸಭೆಗೆ ಇದು ಮೋದಿ ನೇತೃತ್ವದ ಬಿಜೆಪಿಯ ಮೊದಲ ರಣಕಹಳೆ ಎಂದೇ ಪಕ್ಷದ ನಾಯಕರು ಬಣ್ಣಿಸಿದ್ದಾರೆ.
ಈ ಮೆಗಾ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಂತ್ರಿಮಂಡಲದ ಸದಸ್ಯರಾದ ಪ್ರಕಾಶ್ ಜಾವಡೇಕರ್, ಡಾ. ಹರ್ಷವರ್ಧನ್, ಹರದೀಪ್ ಸಿಂಗ್ ಪುರಿ, ನಿತ್ಯಾನಂದ ರಾಯ್, ಬಿಜೆಪಿ ಮಿತ್ರ ಪಕ್ಷಗಳ ಸಂಸದರು. ಮತ್ತು ಮುಖಂಡರು ಭಾಗವಹಿಸಿದ್ದರು.
ದೆಹಲಿ ಇಂದು ಸಂಪೂರ್ಣ ಕೇಸರಿಮಯವಾಗಿತ್ತು. ಅಸಂಖ್ಯಾತ ಕಾರ್ಯಕರ್ತರು ಮೈದಾನದಲ್ಲಿ ಜಮಾಯಿಸಿದ್ದರು. ಕಮಲ ಲಾಂಛನದ ಧ್ವಜಗಳು ಹಾರಾಡುತ್ತಿದ್ದವು. ಮೈದಾನ ಸುತ್ತಮತ್ತ ಮೋದಿ, ಅಮಿತ್ ಶಾ ಸೇರಿದಂತೆ ಪಕ್ಷದ ಮುಖಂಡರ ಕಟೌಟ್‍ಗಳು ರಾರಾಜಿಸುತ್ತಿದ್ದವು.
ಬಿಗಿ ಭದ್ರತೆ : ಈ ರ್ಯಾಲಿ ವೇಳೆ ಪಾಕಿಸ್ತಾನದ ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆ ಪ್ರಧಾನಿ ಹತ್ಯೆಗೆ ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಿದೆ ಎಂಬ ಆಘಾತಕಾರಿ ವರದಿಗಳ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತಾ ಏರ್ಪಾಡು ಮಾಡಲಾಗಿತ್ತು. ರಾಮಲೀಲಾ ಮೈದಾನ ಮತ್ತು ದೆಹಲಿಯ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯ ಪೋಲೀಸರು, ಅರೆ ಸೇನಾ ಪಡೆಗಳು ಮತ್ತು ಎನ್‍ಎಸ್‍ಜಿ ಕಮ್ಯಾಂಡೋಗಳನ್ನು ಬಿಗಿ ಪಹರೆಗಾಗಿ ಸನ್ನದ್ಧವಾಗಿಡಲಾಗಿತ್ತು.
ಕಟ್ಟಡದ ಮೇಲೆ ಶಾರ್ಪ್‍ಶೂಟರ್‍ಗಳನ್ನು ನಿಯೋಜಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮುಖ ಗುರುತಿಸುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ಪಡೆಗಳನ್ನು ಭದ್ರತಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು.
ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಮಂತ್ರಿಯಾದ ನಂತರ ಇದು ದೆಹಲಿಯಲ್ಲಿ ಅವರ ಮೊಟ್ಟಮೊದಲ ಚುನಾವಣಾ ರ್ಯಾಲಿಯಾಗಿದೆ.