ಉಡುಪಿ: ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯ ಇನ್ನೂ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 20 ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಕಸ್ತೂರಬಾ ಆಸ್ಪತ್ರೆಯ ಅಧೀಕ್ಷಕರು ಸೋಮವಾರ ಬೆಳಗ್ಗೆಯ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಿರುವುದನ್ನು ಭಾನುವಾರ ನಡುರಾತ್ರಿ ತಪಾಸಣೆ ನಡೆಸಿದ ಬಳಿಕ ವೈದ್ಯರು ಖಚಿತಪಡಿಸಿದ್ದರು. ಔಷಧಿ ಪ್ರಮಾಣ ಹೆಚ್ಚಿಸುವುದು ಅಥವಾ ಇದೇ ಪ್ರಮಾಣ ಮುಂದುವರೆಸುವುದು ಇಲ್ಲಾ ಚಿಕಿತ್ಸಾ ವಿಧಾನ ಬದಲಿಸುವ ಕುರಿತು ಡಾ.ಸುಧಾ ವಿದ್ಯಾ ಸಾಗರ್ ನೇತೃತ್ವದ ವೈದ್ಯರ ತಂಡ ನಿರ್ಧರಿಸಲಿದೆ.
ಇನ್ನೊಂದೆಡೆ, ಪೇಜಾವರ ಶ್ರೀಗಳನ್ನು ನೋಡಲು ಹಾಗೂ ಅವರ ಆರೋಗ್ಯ ವಿಚಾರಿಸಲು ಹಲವು ಗಣ್ಯರು ಉಡುಪಿ ಬಳಿಯ ಮಣಿಪಾಲದಲ್ಲಿರುವ ಕಸ್ತೂರಬಾ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸೋಮವಾರ ಕೇಂದ್ರದ ಮಾಜಿ ಸಚಿವೆ ಹಾಗೂ ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಉಡುಪಿಗೆ ರೈಲಿನ ಮೂಲಕ ಬಂದು ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ದಿನಪೂರ್ತಿ ಗುರುಗಳ ಬಳಿಯೇ ಇದ್ದು ಅವರ ಆರೋಗ್ಯಕ್ಕಾಗಿ ಭಾಗವತ ಪಾರಾಯಣ ಮೂಲಕ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥರು ಕಳೆದ ನಾಲ್ಕು ದಿನಗಳಿಂದ ತೊಡಗಿದ್ದಾರೆ.
ಕೇಂದ್ರ ಆರೋಗ್ಯ ಮಂತ್ರಿ ಡಾ ಹರ್ಷವರ್ಧನ್ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶೀಘ್ರ ಗುಣಮುಖರಾಗುವಂತೆ ಕೇಂದ್ರ ಸಚಿವರು ಹಾರೈಸಿದ್ದಾರೆ. ಅಲ್ಲದೆ, ಯಾವುದೇ ನೆರವಿನ ಅಗತ್ಯವಿದ್ದರೆ ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.