ಗೋಲಿಬಾರ್ ಪ್ರಕರಣ-ಸಾವನ್ನಪ್ಪಿದ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಬೆಂಗಳೂರು, ಡಿ.22- ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಾವನ್ನಪ್ಪಿದ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಲಿಬಾರ್ ಘಟನೆ ಬಗ್ಗೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದರು.

ನಿನ್ನೆ ಮಂಗಳೂರಿಗೆ ತೆರಳಿ ಮೃತರ ಕುಟುಂಬದ ಜತೆ ಸಮಾಲೋಚನೆ ನಡೆಸಿದ್ದೇನೆ. ಕಾನೂನಾತ್ಮಕವಾಗಿ ಪರಿಶೀಲಿಸಿ ಮೃತಪಟ್ಟಿರುವ ನೌಶಿನ್ ಮತ್ತು ಜಲೀಲ್ ಇಬ್ಬರ ಕುಟುಂಬಕ್ಕೂ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಗೋಲಿಬಾರ್ ಘಟನೆ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಯಾವ ಸ್ವರೂಪದ ತನಿಖೆ ಎಂಬುದನ್ನು ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಮಂಗಳೂರಿಗೆ ತೆರಳಲು ನಾವು ಯಾರಿಗೂ ಅಡ್ಡಿಪಡಿಸಿಲ್ಲ. ವಿರೋಧ ಪಕ್ಷದ ಸಿದ್ದರಾಮಯ್ಯ ಸೇರಿದಂತೆ ಯಾರು ಬೇಕಾದರೂ ಮಂಗಳೂರಿಗೆ ತೆರಳಬಹುದು. ಯಾರನ್ನೂ ನಿರ್ಬಂಧಿಸುವುದಿಲ್ಲ ಎಂದು ಹೇಳಿದರು.

ಮಂಗಳೂರಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಅನಗತ್ಯವಾಗಿ ಪ್ರಚೋದನೆ ಮಾಡದೆ ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ