ಪ್ರಕ್ಷುಬ್ಧಗೊಂಡಿದ್ದ ಮಂಗಳೂರಿನಲ್ಲಿ ಶಾಂತ ಪರಿಸ್ಥಿತಿ

ಮಂಗಳೂರು, ಡಿ.22- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ, ಗೋಲಿಬಾರ್ ಘಟನೆಗಳಿಂದ ಪ್ರಕ್ಷುಬ್ಧಗೊಂಡಿದ್ದ ಮಂಗಳೂರಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಇಂದು ಹಗಲು ವೇಳೆ ಕಫ್ರ್ಯೂವನ್ನು ಸಡಿಲಿಸಲಾಗಿದೆ. ರಾತ್ರಿ ಮಾತ್ರ ಕಫ್ರ್ಯೂ ಮುಂದುವರಿಸಲು ನಿರ್ಧರಿಸಲಾಗಿದೆ. ಹಗಲು ಕಫ್ರ್ಯೂ ರದ್ದಾದ ಹಿನ್ನೆಲೆಯಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದರು. ಬಂದರುಗಳಲ್ಲಿ ಮೀನುಗಳ ವಹಿವಾಟು ಎಂದಿನಂತೆ ಇತ್ತು. ಬಸ್, ಆಟೋ, ಟ್ಯಾಕ್ಸಿಗಳು ಮಾಮೂಲಿನಂತೆ ಸಂಚರಿಸಿದವು. ಕಳೆದೆರಡು ದಿನಗಳಿಂದ ಸ್ಥಗಿತಗೊಂಡಿದ್ದ ಇಂಟರ್‍ನೆಟ್ ಸೇವೆ ಪ್ರಾರಂಭವಾಯಿತು.

ಮೂರು ದಿನಗಳ ಕಾಲ ಕಫ್ರ್ಯೂ ಇದ್ದಿದ್ದರಿಂದ ಮಂಗಳೂರು ಜನ ತೀವ್ರ ಆತಂಕಕ್ಕೊಳಗಾಗಿದ್ದರು. ಕಫ್ರ್ಯೂವನ್ನು ಹಂತ ಹಂತವಾಗಿ ಸಡಿಲಗೊಳಿಸಲಾಯಿತು. ನಿನ್ನೆ ಬೆಳಗ್ಗೆ 6 ರಿಂದ 8 ಗಂಟೆವರೆಗೆ ಕಫ್ರ್ಯೂವನ್ನು ಸಡಿಲಗೊಳಿಸಲಾಗಿತ್ತು.

ನಿನ್ನೆ ಸಂಜೆಯೂ ಕೂಡ ಕಫ್ರ್ಯೂವನ್ನು ಸಡಿಲಗೊಳಿಸಲಾಗಿತ್ತು. ಇಂದು ಇಡೀ ದಿನ ಕಫ್ರ್ಯೂವನ್ನು ಸಡಿಲಿಸಲು ಆದೇಶಿಸಲಾಗಿದೆ. ಹಾಗಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಕಳೆದ ಮೂರು ದಿನಗಳ ಹಿಂದೆ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದು ಪೋಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಡೆಸಿದ ಗೋಲಿಬಾರ್‍ಗೆ ಇಬ್ಬರು ಸಾವನ್ನಪ್ಪಿದ್ದರು.

ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಯು.ಟಿ.ಖಾದರ್ ಸೇರಿದಂತೆ ಹಲವರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಫ್ರ್ಯೂ ಸಡಿಲಿಸುವಂತೆ ಸ್ಥಳೀಯ ನಾಯಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಸೂಚನೆ ನೀಡಿದ್ದರು.

ಮಂಗಳೂರು ನಗರದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೋಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ