ಚೆನ್ನೈ, ಡಿ.22- ಕಳೆದ ರಾತ್ರಿ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತಚಿತ್ರರಂಗದ 66ನೇ ಫಿಲಂಫೇರ್ ಅವಾರ್ಡ್ ಸಮಾರಂಭದಲ್ಲಿ ತಾರೆಗಳ ರಂಗು ಮೇಳೈಸಿತ್ತು.
ಕನ್ನಡ ಚಿತ್ರರಂಗವನ್ನು ವಿಶ್ವದ ಮಟ್ಟಕ್ಕೆ ಕೊಂಡೊಯ್ದ ಕೆಜಿಎಫ್ ಚಿತ್ರದ ಹವಾ ಇಲ್ಲೂ ಜೋರಾಗಿದ್ದು, ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದರೆ, ಟಗರು ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಅತ್ಯುತ್ತಮ ನಟಿಯಾಗಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು.
ದಕ್ಷಿಣ ಭಾರತ ಚಿತ್ರರಂಗಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕನ್ನಡ ವಿಭಾಗದಲ್ಲಿ ಶ್ರುತಿಹರಿಹರನ್ ನಟಿಸಿದ್ದ ನಾತಿಚರಾಮಿ ಚಿತ್ರವು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮಂಸೋರೆ (ಅತ್ಯುತ್ತಮ ನಿರ್ದೇಶಕ), ಶರಣ್ಯ (ಪೋಷಕ ನಟಿ), ಶೃತಿ ಹರಿಹರನ್ (ಅತ್ಯುತ್ತಮ ವಿಮರ್ಶಕರ ಪ್ರಶಸ್ತಿ), ಬಿಂದು ಮಾಲಿನಿ (ಅತ್ಯುತ್ತಮ ಗಾಯಕಿ) ಪ್ರಶಸ್ತಿಗಳನ್ನು ಸೂರೆಗೊಂಡಿದ್ದಾರೆ.
ಇನ್ನುಳಿದಂತೆ ಪ್ರಶಾಂತ್ ನೀಲ್ (ಅತ್ಯುತ್ತಮ ನಿರ್ದೇಶಕ), ನೀನಾಸಂ ಸತೀಶ್ (ಅತ್ಯುತ್ತಮ ವಿಮರ್ಶಕರ ನಟ ಪ್ರಶಸ್ತಿ), ಡಾಲಿ ಧನಂಜಯ್(ಪೋಷಕ ನಟ), ವಾಸುಕಿ ವೈಭವ್ (ಅತ್ಯುತ್ತಮ ಸಂಗೀತ ನಿರ್ದೇಶಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ), ಅಂಚಿತ್ ಹೆಗ್ಡೆ ಶ್ರೇಷ್ಠ ಯುವ ಗಾಯಕ, ಹೆಚ್.ಎಚ್.ವೆಂಕಟೇಶಮೂರ್ತಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಗಳನ್ನು ಬಾಚಿಗೊಂಡಿದ್ದಾರೆ.
ತೆಲುಗು ಪ್ರಶಸ್ತಿ ವಿಭಾಗದಲ್ಲಿ ರಂಗಸ್ಥಳಂ ಚಿತ್ರದ ನಟನೆಗಾಗಿ ರಾಮ್ಚರಣ್ ತೇಜ ಅತ್ಯುತ್ತಮ ನಟನೆನಿಸಿಕೊಂಡರೆ, ಮಹಾನಟಿ ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದನಾ ಗೀತಾಗೋವಿಂದಂ ಚಿತ್ರದ ನಟನೆಗಾಗಿ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.