ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣ- ಆರೋಪಿಗಳ ಶವಗಳ ಪರೀಕ್ಷೆ ಎರಡನೇ ಬಾರಿಗೆ

ನವದೆಹಲಿ/ಹೈದರಾಬಾದ್, ಡಿ.22- ಹೈದರಾಬಾದ್‍ನ ಪಶುವೈದ್ಯೆ ದಿಶಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಪೋಲೀಸ್ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಆರೋಪಿಗಳ ಶವಗಳನ್ನು ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲು ವಿಧಿ ವಿಜ್ಞಾನ ವೈದ್ಯರ ತಂಡವೊಂದರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ರಚಿಸಿದೆ.

ಏಮ್ಸ್‍ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ನೇತೃತ್ವದ ಈ ತಂಡದಲ್ಲಿ ಡಾ. ಆದರ್ಶ್ ಕುಮಾರ್ ಮತ್ತು ಡಾ. ಅಭಿಷೇಕ್ ಯಾದವ್ ಸದಸ್ಯರಾಗಿದ್ದಾರೆ. ಎರಡನೆ ಬಾರಿ ಮರಣೋತ್ತರ ಪರೀಕ್ಷೆ ನಂತರ ಡಾ. ವರುಣ್ ಚಂದ್ರ ಈ ತಂಡಕ್ಕೆ ನೆರವಾಗಲಿದ್ದಾರೆ.

ಈ ತಂಡವು ನಾಳೆ ಬೆಳಗ್ಗೆ 9 ಗಂಟೆಗೆ ಹೈದರಾಬಾದ್‍ನ ರಾಜ್ಯ ಸರ್ಕಾರಿ ಒಡೆತನದ ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಎರಡನೆ ಬಾರಿ ಶವಪರೀಕ್ಷೆ ನಡೆಸಲಿದೆ ಎಂದು ತೆಲಂಗಾಣ ವಿಶೇಷ ಮುಖ್ಯ ಕಾರ್ಯಾದರ್ಶಿ ಅವರಿಗೆ ಏಮ್ಸ್ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ಇಂದು ಸಂಜೆ 5.15 ನಿಮಿಷಕ್ಕೆ ವೈದ್ಯಕೀಯ ತಂಡ ತೆಲಂಗಾಣಕ್ಕೆ ಪ್ರಯಾಣ ಬೆಳಸಿ ನಾಳೆ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಹಿಂದಿರುಗಲಿದೆ.

ಎನ್‍ಕೌಂಟರ್‍ನಲ್ಲಿ ಹತರಾದ ಅತ್ಯಾಚಾರಿ ಆರೋಪಿಗಳಾದ ಮಹಮದ್ ಆರಿಫ್, ಶಿವ, ನನೀವ್ ಮತ್ತು ಚನ್ನಕೇಶವುಲು ಅವರ ಶವಗಳಿಗೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ