ಸರ್ಕಾರ ನನ್ನ ಹಕ್ಕುಗಳನ್ನು ಧಮನ ಮಾಡುತ್ತಿದೆ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.20- ಗಲಭೆ ಪೀಡಿತ ಮಂಗಳೂರಿಗೆ ತೆರಳಲು ಮುಂದಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿಶೇಷ ವಿಮಾನ ಹಾರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೋಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟಿದ್ದು, ಅವರ ಕುಟುಂಬದವರನ್ನು ಭೇಟಿ ಮಾಡಲು ಕಾಂಗ್ರೆಸ್ ನಿಯೋಗ ಮಂಗಳೂರಿಗೆ ತೆರಳಿತ್ತು. ಆದರೆ, ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದು ಪೋಲೀಸರು ಬಂಧಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಲು ಸಿದ್ದರಿದ್ದರು. ಆದರೆ, ವಿಮಾನ ಯಾನ ಪ್ರಾಧಿಕಾರದ ಅಧಿಕಾರಿಗಳು ಹಾಗೂ ರಾಜ್ಯದ ಪೋಲೀಸರು ವಿಶೇಷ ವಿಮಾನಗಳ ಹಾರಟಕ್ಕೆ ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಮಂಗಳೂರು ಪ್ರಯಾಣ ಇಂದು ರದ್ದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ತೊಂದರೆಯಲ್ಲಿರುವ ಜನರನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕಾಗಿರುವುದು ನನ್ನ ಕರ್ತವ್ಯ. ಯಾವುದೇ ಪ್ರಚೋದನೆ ನೀಡಲು ಹೋಗುತ್ತಿರಲಿಲ್ಲ. ಸರ್ಕಾರ ನನ್ನ ಹಕ್ಕುಗಳನ್ನು ಧಮನ ಮಾಡುತ್ತಿದೆ. ನನ್ನ ಪ್ರವಾಸಕ್ಕೆ ಅಡಿಪಡಿಸಲಾಗುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ನನ್ನ ಪ್ರವಾಸವನ್ನು ಮುಂದೂಡಿದ್ದೇನೆ. ನಾಳೆ ಬೆಳಗ್ಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಅನಾರೋಗ್ಯದಿಂದ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದು, ದೂರದ ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ವೈದ್ಯರೊಬ್ಬರನ್ನು ಜತೆಯಲ್ಲಿ ಕರೆದುಕೊಂಡು ನಾನು ಮಂಗಳೂರಿಗೆ ಹೊರಟಿದ್ದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ