ಖಾದರ್ ಒಬ್ಬ ಭಯೋತ್ಪಾದಕನಂತೆ ಮಾತನಾಡಿದ್ದಾರೆ- ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಡಿ.20-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಪ್ರಕ್ಷುಬ್ದ ಪರಿಸ್ಥಿತಿಗೆ ಮಾಜಿ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಯೇ ಕಾರಣವಾಗಿದ್ದು, ತಕ್ಷಣ ಅವರ ವಿರುದ್ದ ದೂರು ದಾಖಲಿಸಿ ಬಂಧಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ಜಾರಿಯಾದರೆ ಕರ್ನಾಟಕ ಹೊತ್ತಿ ಉರಿಯಲಿದೆ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಇದರಿಂದಲೇ ಜನರು ರೊಚ್ಚಿಗೆದ್ದು ಹಿಂಸಾಚಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯು.ಟಿ.ಖಾದರ್ ವಿರುದ್ಧ ತಕ್ಷಣವೇ ಪೋಲೀಸರು ದೂರು ದಾಖಲಿಸಬೇಕು. ಅವರನ್ನು ಬಂಧಿಸಿದಾಗಲೇ ಬೇರೆಯವರಿಗೆ ಇದು ಎಚ್ಚರಿಕೆ ಪಾಠವಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಖಾದರ್ ಒಬ್ಬ ಭಯೋತ್ಪಾದಕನಂತೆ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್‍ಗೆ ಯು.ಟಿ.ಖಾದರ್ ನೇರ ಕಾರಣ. ಕೂಡಲೇ ಇದರ ನೈತಿಕ ಹೊಣೆಯನ್ನು ಅವರೇ ಹೊತ್ತುಕೊಳ್ಳಬೇಕು. ಇನ್ನು ಮುಂದಾದರೂ ಇಂತಹ ಹೇಳಿಕೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಮಾಡಲು ಕೆಲಸವಿಲ್ಲದೆ ಮಸೂದೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ. ಈ ಮಸೂದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದ್ದರೂ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಯ್ದೆ ಜಾರಿಯಾಗುವುದರಿಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗುವುದಿಲ್ಲ ಎಂದು ಖುದ್ದು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರೇ ಮನವಿ ಮಾಡಿದ್ದಾರೆ.

ಮುಸ್ಲಿಂ ನಿಯೋಗವೂ ಸಹ ಇದಕ್ಕೆ ಸಮ್ಮತಿಸಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‍ನವರು ಒಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಇನ್ನು ಮುಂದೆ ತನ್ನ ಹೆಸರು ಬದಲಾಯಿಸಿಕೊಂಡು ಭಯೋತ್ಪಾದಕರ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ವೋಟ್ ಬ್ಯಾಂಕ್‍ಗಾಗಿ ಕೀಳುಮಟ್ಟದ ರಾಜಕಾರಣ ಮಾಡುವುದು ಬೇಡ. ಶಾಂತಿಸುವ್ಯವಸ್ಥೆಯಿಂದಿರುವ ಕರ್ನಾಟಕದಲ್ಲಿ ಎಲ್ಲರೂ ಬದುಕಲು ಬಿಡಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ