ಮತ್ತೆ ಹೆಚ್ಚಾಗತೊಡಗಿದ ಮಹದಾಯಿ ಹೋರಾಟದ ಕಿಚ್ಚು

ಬೆಂಗಳೂರು, ಡಿ.19- ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ಹೋರಾಟದ ಕಿಚ್ಚು ಮತ್ತೆ ಹೆಚ್ಚಾಗತೊಡಗಿದೆ. ಮಹದಾಯಿ ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಮೋಸ ಮಾಡಿದೆ ಎಂದು ಆರೋಪಿಸಿ ಇನ್ನೆರಡು ದಿನಗಳಲ್ಲಿ ಹೋರಾಟ ಮಾಡಲು ರೈತರು, ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದಾರೆ.

ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಉಪಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ, ತಾನೇ ನೀಡಿರುವ ಅನುಮತಿಯನ್ನು ಕೇಂದ್ರ ಪರಿಸರ ಇಲಾಖೆ ತಡೆ ಹಿಡಿಯುವ ಮೂಲಕ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಮಹದಾಯಿ ಹೋರಾಟಗಾರರು ಇನ್ನೆರಡು ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ತೀರ್ಮಾನಿಸಿದ್ದಾರೆ.

ಮಹದಾಯಿ ಹೋರಾಟಗಾರ ಶಂಕರಪ್ಪ ಅಂಬಲಿ ಮಾತನಾಡಿ, ಗೋವಾ ಸರ್ಕಾರ, ಕಾಂಗ್ರೆಸ್‍ಗೆ ಮಣಿದಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಅರಿವಿಲ್ಲ. ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರಕ್ಕೆ, ಬಿಜೆಪಿ ಸಂಸದರಿಗೆ ಇದು ಗೊತ್ತಿಲ್ಲವೆ ಎಂದು ಕಿಡಿಕಾರಿದರು.

ಮಹದಾಯಿಗಾಗಿ ಕಳೆದ ಮೂರೂವರೆ ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ಇಷ್ಟು ದೊಡ್ಡ ಪ್ರಮಾಣದ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ನಮ್ಮ ಪಾಲಿನ ನೀರನ್ನು ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ನ್ಯಾಯಮಂಡಳಿ ನೀಡಿರುವ ಆದೇಶದಂತೆ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಮತ್ತು ಅರಣ್ಯ ಇಲಾಖೆ ವತಿಯಿಂದ ಅನುಮತಿ ನೀಡಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಉಪಸ್ಥಿತಿಯಲ್ಲೇ ಕಳೆದ ಆಕ್ಟೋಬರ್‍ನಲ್ಲೇ ಪರಿಸರ ಸಚಿವ ಜಾವ್ಡೇಕರ್ ಕರ್ನಾಟಕಕ್ಕೆ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ನೀಡಿರುವ ಬಗ್ಗೆ ಘೊಷಣೆ ಮಾಡಿದ್ದರು. ಈಗ ತನ್ನ ಆದೇಶ ತಡೆಹಿಡಿಯುವ ಮೂಲಕ ರಾಜ್ಯದ ಜನತೆ ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಮೋಸ ಮಾಡಿದೆ.

ಗೋವಾ ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್ ಅವರು ಪ್ರಕಾಶ್ ಜಾವ್ಡೇಕರ್ ಅವರೊಂದಿಗೆ ಚರ್ಚಿಸಿ ಆದೇಶಕ್ಕೆ ತಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಿನ್ನೆ ಕೇಂದ್ರ ಪರಿಸರ ಸಚಿವಾಲಯದ ಉಪನಿರ್ದೇಶಕರು ಆದೇಶಕ್ಕೆ ತಡೆ ನೀಡಿರುವ ಬಗ್ಗೆ ರಾಜ್ಯಕ್ಕೆ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಈ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಿನ್ನೆ ಹುಬ್ಬಳ್ಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಹದಾಯಿ ಹೋರಾಟಗಾರರು ಮನವಿ ನೀಡಿದ್ದು, ನಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಿದ್ದೇವೆ. ಉಪ ಚುನಾವಣೆ ಸಂದರ್ಭದಲ್ಲಿ ಜನರ ಮೂಗಿಗೆ ತುಪ್ಪ ಸವರುವ ಸರ್ಕಾರಗಳು ಈ ರೀತಿ ಅನ್ಯಾಯ ಮಾಡುವುದನ್ನು ನಾವು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ