ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಅಧಿಕಾರಿಗಳ ಪ್ರಮಾದ-200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಚರ್ಚ್‍ಗೆ ಖಾತಾ ಬದಲಾವಣೆ

ಬೆಂಗಳೂರು, ಡಿ.19- ಬಿಬಿಎಂಪಿಯ ಕೆಳಹಂತದ ಅಧಿಕಾರಿಗಳು ಉನ್ನತ ಅಧಿಕಾರಿಗಳ ಗಮನಕ್ಕೆ ತಾರದೆಯೇ ಸುಮಾರು 200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಚರ್ಚ್‍ಗೆ ಖಾತಾ ಮಾಡಿಕೊಟ್ಟುಬಿಟ್ಟಿದ್ದಾರೆ.

ಖಾತಾ ತಿದ್ದುಪಡಿ ಹೆಸರಿನಲ್ಲಿ ಬೇಗೂರಿನ ಸೆಂಟ್ ಇಗ್ನೇಷಿಯಸ್ ಚರ್ಚ್‍ಗೆ ಸುಮಾರು 200 ಕೋಟಿ ರೂ. ಮೌಲ್ಯದ ಪಾಲಿಕೆ ಆಸ್ತಿಯನ್ನು ಉನ್ನತ ಅಧಿಕಾರಿಗಳು ಮತ್ತು ಕೌನ್ಸಿಲ್ ಗಮನಕ್ಕೆ ತರದೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಅಧಿಕಾರಿಗಳು ಖಾತಾ ಮಾಡಿಕೊಟ್ಟಿದ್ದಾರೆ.

ಬೇಗೂರು ಬಿಬಿಎಂಪಿಗೆ ಸೇರುವುದಕ್ಕೂ ಮೊದಲು 40,161 ಚದರ ಅಡಿ ಸರ್ಕಾರಿ ಜಾಗವನ್ನು ನಗರಸಭೆಯಿಂದ ಸೆಂಟ್ ಇಗ್ನೇಷಿಯಸ್ ಚರ್ಚ್ ಪಡೆದುಕೊಂಡಿತ್ತು.

2008ರಲ್ಲಿ ಬೇಗೂರು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಯಿತು. 2015ರಲ್ಲಿ ಸೆಂಟ್ ಇಗ್ನೇಷಿಯಸ್ ಚರ್ಚ್ 40,161 ಚದರ ಅಡಿ ಆಸ್ತಿಗೆ ಖಾತಾ ನೋಂದಣಿ ಮಾಡಿಕೊಡುವಂತೆ ಬೇಗೂರು ಉಪವಲಯ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಜತೆಗೆ 40,161 ಚದರಡಿ ಇರುವ ಜಾಗವನ್ನು 2,08,263 ಚದರ ಅಡಿಗೆ ಖಾತಾ ಬದಲಾವಣೆ ಮಾಡಿಕೊಡುವಂತೆ ಕೋರಲಾಗಿತ್ತು.

ಆ ಮನವಿ ಪರಿಗಣಿಸಿ ಬೊಮ್ಮನಹಳ್ಳಿ ವಲಯದ ಆಗಿನ ಕಂದಾಯ ವಿಭಾಗದ ಅಧಿಕಾರಿಗಳು ಸುಮಾರು 200 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಸೆಂಟ್ ಇಗ್ನೇಷಿಯಸ್ ಚರ್ಚ್ ಹೆಸರಿಗೆ ಖಾತಾ ಮಾಡಿಕೊಟ್ಟಿದ್ದಾರೆ. ಈ ವಿಚಾರವನ್ನು ಬಿಬಿಎಂಪಿಯ ಕೌನ್ಸಿಲ್ ಸಭೆ ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತರದೆ ಮರೆಮಾಚಲಾಗಿದೆ.

ಬಿಬಿಎಂಪಿಯ ಯಾವುದೇ ಆಸ್ತಿಯನ್ನು ಗುತ್ತಿಗೆ ಆಧಾರದಲ್ಲಿ ಸಂಘ ಸಂಸ್ಥೆಗಳಿಗೆ ನೀಡುವುದಕ್ಕೆ ಬಿಬಿಎಂಪಿ ಕೌನ್ಸಿಲ್ ಹಾಗೂ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ಕೌನ್ಸಿಲ್ ಮತ್ತು ಸರ್ಕಾರದ ಗಮನಕ್ಕೆ ತರದೆಯೇ 200 ಕೋಟಿ ರೂ. ಆಸ್ತಿಯನ್ನು ಸೆಂಟ್ ಇಗ್ನೇಷಿಯಸ್ ಚರ್ಚ್‍ಗೆ ಖಾತಾ ಮಾಡಿಕೊಟ್ಟಿದ್ದಾರೆ.

ಖಾತಾ ಮಾಡಿಕೊಡುವ ವೇಳೆ ಅಭಿವೃದ್ಧಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿ ಮಾಡಬೇಕು. ಚರ್ಚ್ ವತಿಯಿಂದ ಶಾಲೆ-ಕಾಲೇಜು ನಡೆಸುತ್ತಿದೆ ಎಂದು ಅದಕ್ಕೂ ಬಿಬಿಎಂಪಿ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ. ಇದರಿಂದ ಪಾಲಿಕೆಗೆ ಸುಮಾರು 36 ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ. ಕೂಡಲೇ ಆಸ್ತಿಯನ್ನು ಬಿಬಿಎಂಪಿ ವಶಕ್ಕೆ ಪಡೆದುಕೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‍ಕುಮಾರ್, ಖಾತಾ ತಿದ್ದುಪಡಿ ಹೆಸರಿನಲ್ಲಿ ಬಿಬಿಎಂಪಿ ಆಸ್ತಿಯನ್ನು ಖಾಸಗಿಯವರಿಗೆ ಖಾತಾ ಮಾಡಿಕೊಟ್ಟಿರುವ ಬಗ್ಗೆ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ