ನವದೆಹಲಿ, ಡಿ.19- ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಡಪಕ್ಷದ ನಾಯಕರು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಪೋಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಕಮ್ಯೂನಿಷ್ಟ್ ನಾಯಕರಾದ ಡಿ.ರಾಜ, ಸೀತಾರಾಮ್ ಯಚೂರಿ, ನೀಲೋತ್ಪಲ್ಬಸು, ಬೃಂದಾ ಕಾರಟ್ ಸೇರಿದಂತೆ ಪಕ್ಷದ ಕೆಲ ಮುಖಂಡರು ಮತ್ತು ಕಾರ್ಯಕರ್ತರನ್ನು ಪೋಲೀಸರು ಮಂಡಿಹೌಸ್ ಬಳಿ ಬಂಧಿಸಿದರು.
ಇದೇ ವೇಳೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಾನೂನು ಉಲ್ಲಂಘಿಸಿ ಕೆಂಪುಕೋಟೆಯಲ್ಲಿ ಪ್ರತಿಭಟನೆ ನಡೆಸಿದ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತು ಇತರ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ.
ದೆಹಲಿಯ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ಇನ್ನೂ ಅನೇಕರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಂಬೈನಲ್ಲಿ ಎನ್ಸಿಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇಂದು ಬೆಳಗ್ಗೆ ಹಮ್ ಭಾರತ್ಕೆ ಲೋಗ್ ಎಂಬ ಅಭಿಯಾನದಡಿ ಮೆರವಣಿಗೆ ನಡೆಸುತ್ತಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೋಲೀಸರು ತಡೆದಾಗ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಕೆಲವರನ್ನು ಬಂಧಿಸಿದರು.
ಬಿಹಾರ, ಪಂಜಾಬ್, ಗೋವಾ ಮತ್ತಿತರ ರಾಜ್ಯಗಳಲ್ಲೂ ಪ್ರತಿಭಟನೆ ನಡೆಸಿ ವಾಹನಗಳು ಮತ್ತು ರೈಲು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಘಟನೆಯೂ ನಡೆದಿದ್ದು, ಈ ಸಂಬಂಧ ಅನೇಕರನ್ನು ಪೆÇಲೀಸರು ಬಂಧಿಸಿರುವ ವರದಿಯಾಗಿದೆ.