ಹಸಿತ್ಯಾಜ್ಯ ಸಂಸ್ಕರಣೆ ಮಾಡದ ನಗರದ ಪಂಚತಾರಾ ಹೊಟೇಲ್-30 ಸಾವಿರ ರೂ. ದಂಡ ವಿಧಿಸಿದ ಬಿಬಿಎಂಪಿ

ಬೆಂಗಳೂರು, ಡಿ.19- ಹಸಿತ್ಯಾಜ್ಯ ಸಂಸ್ಕರಣೆ ಮಾಡದ ನಗರದ ಪಂಚತಾರಾ ಹೊಟೇಲ್‍ವೊಂದಕ್ಕೆ ಬಿಬಿಎಂಪಿ 30 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ನಗರದ ಹೊರವಲದಲ್ಲಿರುವ ನವಾಶಲ್ ಹೊಟೇಲ್‍ಗೆ ಘನತ್ಯಾಜ್ಯ ವಿಲೇವಾರಿ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಈ ಪಂಚತಾರಾ ಹೊಟೇಲ್‍ನಲ್ಲಿ ಅಳವಡಿಸಲಾಗಿದ್ದ ಹಸಿತ್ಯಾಜ್ಯ ಸಂಸ್ಕರಣಾ ಘಟಕ ಸರಿಯಾಗಿ ನಿರ್ವಹಣೆಯಾಗದಿರುವುದು ಮತ್ತು ಘಟಕದ ಯಂತ್ರ ಲೋಪದೋಷದಿಂದ ಕೂಡಿರುವುದು ಕಂಡುಬಂದಿತು.

ಕೂಡಲೇ ಯಂತ್ರವನ್ನು ಸರಿಪಡಿಸಬೇಕು. ಹಸಿತ್ಯಾಜ್ಯವನ್ನು ನೀವೇ ಸಂಸ್ಕರಿಸಿ ವಿಲೇವಾರಿ ಮಾಡಬೇಕೆಂದು ರಂದೀಪ್ ಅವರು ಹೊಟೇಲ್‍ನವರಿಗೆ ಸೂಚಿಸಿ ಸ್ಥಳದಲ್ಲೇ 30 ಸಾವಿರ ರೂ. ದಂಡ ವಿಧಿಸಿದರು.

ಈ ವೇಳೆ ಮಾತನಾಡಿದ ರಂದೀಪ್, ಪಂಚತಾರಾ, ತ್ರಿಸ್ಟಾರ್ ಹೊಟೇಲ್‍ನವರು ತಮ್ಮಲ್ಲಿ ಸಂಗ್ರಹವಾಗುವ ಹಸಿತ್ಯಾಜ್ಯವನ್ನು ತಾವೇ ಸಂಸ್ಕರಿಸಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾವು ಯಾವುದೇ ಸಂದರ್ಭದಲ್ಲಾದರೂ ಹೊಟೇಲ್‍ಗಳಿಗೆ ದಿಢೀರ್ ಭೇಟಿ ನೀಡಬಹುದು. ಆ ಸಂದರ್ಭದಲ್ಲಿ ಯಾವುದೇ ಸಬೂಬು ಹೇಳಿದರೂ ನಾವು ಕೇಳುವುದಿಲ್ಲ. ತ್ಯಾಜ್ಯ ಸಂಸ್ಕರಿಸದಿದ್ದರೆ ಮೊದಲು ಸಣ್ಣ ಪ್ರಮಾಣದ ದಂಡ ವಿಧಿಸಲಾಗುವುದು. ಇದಕ್ಕೆ ಬಗ್ಗದಿದ್ದರೆ ಹೆಚ್ಚಿನ ದಂಡ ವಿಧಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ