ಬೆಂಗಳೂರು,ಡಿ.19-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದರ ಹಿಂದೆ ಕಾಂಗ್ರೆಸ್ನ ಕೈವಾಡವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೇರ ಆಪಾದನೆ ಮಾಡಿದರು.
ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾದ ಕರ್ನಾಟಕದಲ್ಲಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ನ ಕುಮ್ಮಕ್ಕು ಕಾರಣ ಎಂದು ಆರೋಪಿಸಿದರು.
ಒಂದು ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ. ಕಾಂಗ್ರೆಸ್ ನಾಯಕರು ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಎಂ ನೇರವಾಗಿ ಎಚ್ಚರಿಕೆ ಕೊಟ್ಟರು.
ಬೇರೆ ರಾಜ್ಯಗಳಲ್ಲಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರಬಹುದು. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಕೆಲವು ಸಂಘಟನೆಗಳಿಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ. ಮುಂದೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ಏನನ್ನು ಸೂಚಿಸುತ್ತದೆ. ಅಂಥವರ ಕೈವಾಡದಿಂದಲೇ ಇಂತಹ ಘಟನೆಗಳು ನಡೆಯುತ್ತವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಬೆಂಕಿ ಹಚ್ಚುತ್ತೇನೆಂದರೆ ಬೇರೆಯವರು ಸುಮ್ಮನೆ ಇರುತ್ತಾರಾ ಎಂದು ಪ್ರಶ್ನಿಸಿದರು.
ನಾನು ಅಲ್ಪಸಂಖ್ಯಾತರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಕಾಯ್ದೆ ಜಾರಿಯಾಗುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಿಮ್ಮ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ದಯಮಾಡಿ ಎಲ್ಲರೂ ಸಹಕಾರ ಕೊಡಿ ಎಂದು ಮನವಿ ಮಾಡಿದರು.
ಕಾಯ್ದೆ ವಿರೋಧವಾಗಿ ಯಾರೊಬ್ಬರೂ ಪ್ರತಿಭಟನೆ ನಡೆಸುವಂತಿಲ್ಲ. ಈಗಾಗಲೇ ಎಲ್ಲ ಕಡೆ 144ನೇ ಸೆಕ್ಷನ್ ವಿಧಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದರು.
ವಿದ್ಯಾರ್ಥಿಗಳು, ಶಾಲಾಕಾಲೇಜುಗಳು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪೋಲಿಸರಿಗೆ ಸೂಚನೆ ಕೊಡಲಾಗಿದೆ.
ಸಾರ್ವಜನಿಕರು ಎಲ್ಲೂ ಕೂಡ ಪ್ರತಿಭಟನೆ ನಡೆಸುತ್ತಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಆದರೆ ಕೆಲವರು ಪ್ರತಿಭಟನೆ ನಡೆಸಲು ಪ್ರಚೋದನೆ ಮಾಡುತ್ತಿದ್ದಾರೆ. ಇದಕ್ಕೆ ಯಾರೊಬ್ಬರೂ ತಲೆದೂಗಬಾರದೆಂದು ಮನವಿ ಮಾಡಿದರು.
22 ಮತ್ತು 23ರ ನಂತರ ನಾನು ದೆಹಲಿಗೆ ಹೊರಡುತ್ತೇನೆ. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರ ಬಳಿ ಚರ್ಚೆ ಮಾಡಿ ನಂತರ ತೀರ್ಮಾನ ಕೈಗೊಳ್ಳುತ್ತೇನೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.