ಉಪಮುಖ್ಯಮಂತ್ರಿ ಹುದ್ದೆಯನ್ನೇ ರದ್ದುಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಡಿ.19-ಸರ್ಕಾರ ಮತ್ತು ಪಕ್ಷದಲ್ಲಿ ಭಾರೀ ವಿವಾದವನ್ನು ಸೃಷ್ಟಿಸುತ್ತಿರುವ ಉಪಮುಖ್ಯಮಂತ್ರಿ ಹುದ್ದೆಯನ್ನೇ ರದ್ದುಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ.

ಇದೇ 22-23ರಂದು ನವದೆಹಲಿಗೆ ತೆರಳುವ ಅವರು ಸಚಿವ ಸಂಪುಟ ವಿಸ್ತರಣೆಗೆ ಸಮಯವನ್ನು ನಿಗದಪಡಿಸಲಿದ್ದಾರೆ. ಈ ವೇಳೆ ವರಿಷ್ಠರ ಜೊತೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹುದ್ದೆ ರದ್ದುಪಡಿಸುವ ಕುರಿತಂತೆ ಅನುಮತಿಯನ್ನು ಪಡೆದುಕೊಳ್ಳಲಿದ್ದಾರೆ.

ಆಡಳಿತಾತ್ಮಕ ಅನುಕೂಲಕ್ಕಾಗಿ ಮೂರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿದರೆ ಇದರಿಂದ ಸರ್ಕಾರ ಮತ್ತು ಪಕ್ಷದಲ್ಲಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇರುವ ಮೂರು ಹುದ್ದೆಗಳನ್ನು ಕಿತ್ತು ಹಾಕಲು ಬಿಎಸ್‍ವೈ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

23ರ ನಂತರ ಯಾವುದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇನ್ನೊಂದು ಡಿಸಿಎಂ ಹುದ್ದೆಯನ್ನು ನೀಡಬೇಕೆಂದು ಸಚಿವ ಶ್ರೀರಾಮುಲು, ನೂತನ ಶಾಸಕ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ.

ಶತಾಯಗತಾಯ ಡಿಸಿಎಂ ಸ್ಥಾನ ಪಡೆಯಲೇಬೇಕೆಂದು ಇಬ್ಬರು ನಾಯಕರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದು ಬಿಎಸ್‍ವೈಗೆ ಇನ್ನೊಂದು ರೀತಿಯ ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇರುವ ಉಪಮುಖ್ಯಮಂತ್ರಿಗಳ ಹುದ್ದೆಯನ್ನೇ ರದ್ದುಪಡಿಸಬೇಕು. ಮುಖ್ಯಮಂತ್ರಿಗಳೇ ಸಮರ್ಥರಿರುವುದರಿಂದ ಡಿಸಿಎಂ ಸ್ಥಾನ ಅಗತ್ಯವೇ ಇಲ್ಲ ಎಂದು ಹೇಳಿದ್ದರು.

ರೇಣುಕಾಚಾರ್ಯ ಹೇಳಿಕೆಗೆ ಬೆಂಬಲ ಎನ್ನುವಂತೆ ಕಂದಾಯ ಸಚಿವ ಆರ್.ಅಶೋಕ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇನ್ನು ಮುಖ್ಯಮಂತ್ರಿಗಳ ಬಳಿ ಹಲವು ಶಾಸಕರು ಡಿಸಿಎಂ ಸ್ಥಾನ ಬೇಡವೇ ಬೇಡ. ಯಾರಿಗೆ ಕೊಟ್ಟರೂ ಅಸಮಾಧಾನ ಸೃಷ್ಟಿಯಾಗುತ್ತದೆ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ರಮೇಶ್ ಜಾರಕಿಹೊಳಿ ಮುನಿಸಿಕೊಳ್ಳುತ್ತಾರೆ.

ರಮೇಶ್ ಜಾರಕಿಹೊಳಿಗೆ ಡಿಸಿಎಂ ಮಾಡಿದರೆ ಶ್ರೀರಾಮುಲು ಬೇಸರಪಟ್ಟುಕೊಳ್ಳುತ್ತಾರೆ. ಹೀಗಾಗಿ ಡಿಸಿಎಂ ಹುದ್ದೆಗಳನ್ನೇ ರದ್ದುಪಡಿಸಬೇಕೆಂದು ಬಹುತೇಕ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಗೆ ಯಾವುದೇ ಸಾಂವಿಧಾನಿಕ ಸ್ಥಾನಮಾನವಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಮೈತ್ರಿ ಸರ್ಕಾರ ರಚನೆಯಾದಾಗ ಮಾತ್ರ ಈ ಹುದ್ದೆಯನ್ನು ಸೃಷ್ಟಿಸುವುದು ಅನಿವಾರ್ಯವಾಗಿರುತ್ತದೆ. ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಡಿಸಿಎಂ ಸ್ಥಾನದ ಅಗತ್ಯವಾದರೂ ಏನೆಂಬುದು ಬಹುತೇಕ ಶಾಸಕರ ವಾದ.

ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮೊದಲೇ ವರಿಷ್ಠರ ಜೊತೆ ಚರ್ಚೆ ಮಾಡಿ ಮೂರು ಡಿಸಿಎಂ ಸ್ಥಾನಗಳನ್ನು ರದ್ದುಪಡಿಸಬೇಕು. ಆಡಳಿತ ನಡೆಸಲು ನೀವೇ ಸಮರ್ಥರಿರುವಾಗ ಇದು ಅನಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಅಭಿಪ್ರಾಯಕ್ಕೆ ಸಮ್ಮತಿಸಿರುವ ಬಿಎಸ್‍ವೈ, ಡಿ.22ರ ನಂತರ ದೆಹಲಿಗೆ ತೆರಳಿದ ಬಳಿಕ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ. ಡಿಸಿಎಂ ಸ್ಥಾನ ಸೃಷ್ಟಿಸಿರುವುದರಿಂದ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆಯೂ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಅವರಿಗೂ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆಯಾದ ನಂತರ ಬಿಎಸ್‍ವೈ ಪೂರ್ಣ ಮಟ್ಟದ ಸಂಪುಟ ವಿಸ್ತರಣೆ ಮಾಡಿ ಮೂರು ಡಿಸಿಎಂ ಸ್ಥಾನಗಳನ್ನು ತೆಗೆದು ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಹಿರಿಯರಾದ ಗೋವಿಂದ ಕಾರಜೋಳ(ದಲಿತ ಕೋಟಾ), ಡಾ.ಸಿ.ಎನ್. ಅಶ್ವಥ್ ನಾರಾಯಣ(ಒಕ್ಕಲಿಗ) ಹಾಗೂ ಲಕ್ಷ್ಮಣ್ ಸವದಿ(ವೀರಶೈವ ಲಿಂಗಾಯಿತ) ಅವರುಗಳಿಗೆ ಡಿಸಿಎಂ ಸ್ಥಾನ ನೀಡಲಾಗಿತ್ತು.

ಇದೀಗ ಹೆಚ್ಚುವರಿಯಾಗಿ ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸಬೇಕು. ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿಗೆ ಈ ಸ್ಥಾನವನ್ನು ನೀಡಬೇಕೆಂಬ ಕೂಗು ಕೇಳಿಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ