ಬೆಂಗಳೂರು, ಡಿ.19- ನಿಷೇಧಾಜ್ಞೆ ನಡುವೆಯೂ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಹರಸಾಹಸ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.
ಇಂದು ಬೆಳಗ್ಗೆ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಪ್ರತಿಭಟನೆಗಳು ಬಿಸಿಲೇರುತ್ತಿದ್ದಂತೆ ತೀವ್ರತೆ ಪಡೆದುಕೊಳ್ಳಲಾರಂಭಿಸಿದವು.
ಜನರ ದಂಡೆ ಪ್ರತಿಭಟನೆಯತ್ತ ಹರಿದು ಬರುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಪೋಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ತಡೆಯಲು ಶತ ಪ್ರಯತ್ನ ನಡೆಸಿದರು.
ಆದರೆ, ಪೋಲೀಸರೊಂದಿಗೆ ವಾಗ್ವಾದ, ಸಂಘರ್ಷಕ್ಕಿಳಿದ ಪ್ರತಿಭಟನಾಕಾರರು ಅಡೆ-ತಡೆಗಳನ್ನು ಬದಿಗೆ ಸರಿಸಿ ಜಮಾಯಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು, ಕಲಬುರ್ಗಿ, ಬಳ್ಳಾರಿ, ಮೈಸೂರು, ಗದಗ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆ ತೀವ್ರವಾಗಿಯಿತು.
ನಿರೀಕ್ಷೆಗೂ ಮೀರಿ ಜನ ಏಕಾಏಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಸಂಚಾರದಲ್ಲೂ ಕೂಡ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾಕಾರರ ಪೈಕಿ ಪ್ರಮುಖರನ್ನು ಬಂಧಿಸಿ ಕರೆದೊಯ್ಯುವುದು ಪೋಲೀಸರಿಗೆ ತಲೆ ನೋವಾಯಿತು.
ಒಂದೆಡೆ ಪ್ರತಿಭಟನೆಕಾರರನ್ನು ಚದುರಿಸಿದರೆ, ಮತ್ತೊಂದು ಕಡೆ ಗುಂಪು ಗೂಡಿ ಪ್ರತಿಭಟಿಸುತ್ತಿದ್ದರು. ನಿಷೇಧಾಜ್ಞೆಗೆ ಯಾವುದೇ ಕಿಮ್ಮತ್ತಿಲ್ಲದೆ ಪ್ರತಿಭಟನೆ ಬಿರುಸಿನಿಂದ ಮುಂದುವರೆದಿತ್ತು.
ರಾಜಧಾನಿ ಬೆಂಗಳೂರಿನಲ್ಲಿ ಮೊದಲು ಮೈಸೂರು ಬ್ಯಾಂಕ್ ಮತ್ತು ಟೌನ್ಹಾಲ್ ಬಳಿ ಪ್ರತಿಭಟನೆಗಳು ಆರಂಭಗೊಂಡವು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಮನವೊಲಿಸಿ ಗುಂಪನ್ನು ಪೋಲೀಸರು ಚದುರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಮುಖರಾದ ರಾಮಚಂದ್ರ ಗುಹಾ, ಸಿಐಟಿಯುನ ವರಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಸೇರಿದಂತೆ ಅನೇಕ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಟೌನ್ಹಾಲ್, ಮೈಸೂರ್ಬ್ಯಾಂಕ್ನಿಂದ ಚದುರಿಸಿದ ಜನ ಕೆ.ಆರ್.ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಎಸ್.ಬಿ.ರೋಡ್ನಲ್ಲಿ ಜಮಾಯಿಸಿದ್ದರು. ಈ ಭಾಗದಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದ್ದರಿಂದ ಮತ್ತೆ ಟೌನ್ಹಾಲ್ ಬಳಿಯೇ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಯಿತು. ಅಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು.
ಅತ್ತ ಕಲಬುರಗಿಯಲ್ಲೂ ಪ್ರತಿಭಟನೆ ನಡೆದಿದ್ದು, ನಗರೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ಜನ ಪೌರತ್ವ ಕಾಯ್ದೆ ವಿರೋಧಿಸಿ ಘೋಷಣೆಗಳನ್ನು ಕೂಗಿದರು. ನಿಷೇಧಾಜ್ಞೆ ನಡುವೆ ಪ್ರತಿಭಟನೆ ನಡೆಸಿದ ಹಲವರನ್ನು ಪೋಲೀಸರು ವಶಕ್ಕೆ ಪಡೆದರಾದರೂ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಬೈಕ್ ರ್ಯಾಲಿಯಲ್ಲಿ ಬಂದ ಗುಂಪನ್ನು ಪೋಲೀಸರು ತಡೆದಾಗ ಪೋಲೀಸರ ಬ್ಯಾರಿಕೇಡ್ಗಳನ್ನು ನೂಕಿ ಪ್ರತಿಭಟನಾಕಾರರು ಮುಂದೆ ಹೋದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಅಘೋಷಿತ ಬಂದ್ ನಿರ್ಮಾಣವಾಗಿತ್ತು.
ಬಳ್ಳಾರಿಯಲ್ಲೂ ಪ್ರತಿಭಟನೆಗಳು ನಡೆದಿದ್ದು, ರಾಯಲ್ ವೃತ್ತದಲ್ಲಿ ಸಮಾವೇಶಗೊಂಡ ಜನರನ್ನು ಮನವೊಲಿಸಲು ಪೋಲೀಸರು ಪ್ರಯತ್ನಿಸಿ ಕೊನೆಗೆ ಅವರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೋಲೀಸರೊಂದಿಗೆ ಪ್ರತಿಭಟನಾನಿರತರು ಮಾತಿನ ಚಕಮಕಿ ನಡೆಸಿದರು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಮುಸ್ಲಿಂ ಸಂಘಟನೆಗಳು, ರೈತಪರ ಸಂಘಟನೆಗಳು, ಎಡಪಕ್ಷಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. ಪೋಲೀಸರು ಸಂಯಮದಿಂದ ವರ್ತಿಸಿದ್ದು ಎಲ್ಲಿಯೂ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಅಲ್ಲಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬಲವಾಗಿ ವಿರೋಧಿಸಿವೆ.