ಹೋರಾಟದ ಪರಂಪರೆಗೆ ತಡೆಯೊಡ್ಡಬೇಡಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.19- ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ಲೆಕ್ಕಿಸದೆ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವಾರು ಮಂದಿ ಪೋಲೀಸ್ ಬಲ ಉಪಯೋಗಿಸಿ ಪ್ರತಿಭಟನೆ ಹತ್ತಿಕ್ಕುತ್ತಿರುವುದನ್ನು ಖಂಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ನಿಮ್ಮ ಪಕ್ಷಕ್ಕೆ ದೇಶದಲ್ಲಿ ನಡೆದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿರಲಾರದು, ಗಾಂಧಿ, ನೆಹರು ಹಾಗೂ ಪಟೇಲ್ ಸೇರಿದಂತೆ ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಹೋರಾಟದ ಪರಂಪರೆಗೆ ತಡೆಯೊಡ್ಡಬೇಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಮ್ಮ ಜನ ಶಾಂತಿ ಪ್ರಿಯರು. ನ್ಯಾಯಾಲಯದ ಬಗ್ಗೆ ಗೌರವ, ಕಾನೂನಿನ ಬಗ್ಗೆ ನಿಷ್ಠೆ ಉಳ್ಳವರು. ಸಾಮಾಜ ಒಡೆಯುವವರು, ಬೆಂಕಿ ಹಚ್ಚುವವರು ನಿಮ್ಮ ಪಕ್ಷದಲ್ಲೇ ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ನಿಷೇಧಾಜ್ಞೆ ಹೇರಿ ಕನ್ನಡಿಗರನ್ನು ಅವಮಾನಿಸಿದ್ದೀರಿ.

ಪೋಲೀಸ್ ಬಲ ಪ್ರಯೋಗಿಸಿ ಪ್ರತಿಭಟನೆ ಹತ್ತಿಕ್ಕುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಭಟನೆ, ಪ್ರತಿರೋಧ, ಚಳವಳಿಗಳು ಆರೋಗ್ಯ ಪೂರ್ಣ ಪ್ರಜಾಪ್ರಭುತ್ವದ ಲಕ್ಷಣಗಳು, ಭಿನ್ನಮತ ಅಭಿವ್ಯಕ್ತಿಯ ಕೊರಳು ಹಿಚುಕುವುದು ಸರ್ವಾಧಿಕಾರಿ ಧೋರಣೆ. ಇದು ಹಿಟ್ಲರ್‍ನ ಜರ್ಮನಿ ಅಲ್ಲ. ಗಾಂಧೀಜಿಯವರ ಭಾರತ. ಯಡಿಯೂರಪ್ಪ ಅವರೇ ನೀವು ನಿಮ್ಮ ಪಕ್ಷದ ಗುಲಾಮರಾಗಬೇಡಿ. ಆತ್ಮಸಾಕ್ಷಿಗೆ ಕಿವಿಗೊಡಿ ಎಂದು ಸಲಹೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಜನಹಿತದ ಬಗ್ಗೆ ಅಷ್ಟೊಂದು ಭರವಸೆ ಇದ್ದರೆ ಪ್ರತಿಭಟನೆಗೆ ಹೆದರುತ್ತಿರುವುದೇಕೆ ಎಂದು ಪ್ರಧಾನಿ ನರೇಂದ್ರ ಮೋದಿಯವರ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಜನಾಭಿಪ್ರಾಯ ಆಲಿಸಿ ಅವರಿಗೆ ಮನವರಿಕೆ ಮಾಡಿಕೊಡಿ, ದಂಡ ಪ್ರಯೋಗ ಮನುಷ್ಯನ ದೌರ್ಬಲ್ಯ ನಿಮ್ಮ ವರ್ತನೆಯೇ ನಿಮ್ಮ ದುಷ್ಟ ಆಲೋಚನೆಗೆ ಸಾಕ್ಷಿ.ಕಾರ್ಯಾಂಗದ ಮುಖ್ಯಭಾಗವಾಗಿರುವ ಪೋಲೀಸರೇ ನೀವು ಸರ್ಕಾರಿ ನೌಕರರಾಗಿದ್ದರೂ ಮೊದಲು ಮನುಷ್ಯರು. ನೀವು ದೆಹಲಿ ಪೋಲೀಸರಾಗುವುದು ಬೇಡ. ಅವರ ಸ್ಪೂರ್ತಿಯಿಂದ ಕೆಲಸ ಮಾಡಿದರೆ ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸರು ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಪೋಲೀಸರು ಕೂಡಲೇ ನಿಷೇಧಾಜ್ಞೆ ಹಿಂಪಡೆಯಬೇಕು. ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆ ನಡೆಸುವವರಿಗೂ ರಕ್ಷಣೆ ನೀಡುವುದು ಪೋಲೀಸರ ಕರ್ತವ್ಯ. ಶಾಂತಿ ಪಾಲನೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಸಹಕರಿಸಿ. ಬೆಂಗಳೂರಿಗರ ದನಿಯನ್ನು ಅಡಗಿಸಲಾರಿರಿ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಕೂಡ ಪೋಲೀಸರ ಕ್ರಮವನ್ನು ವಿರೋಧಿಸಿದ್ದಾರೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಬಿಜೆಪಿ ಸರ್ಕಾರ ಧಮನಕಾರಿ ಪ್ರವೃತ್ತಿಯನ್ನು ತೋರಿಸುತ್ತಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ