ಸಚಿವ ಶ್ರೀರಾಮುಲುಗೆ ಸಂಪುಟದಲ್ಲಿ ಪ್ರಬಲ ಖಾತೆ ನೀಡಲು ಸಮ್ಮತಿ

ಬೆಂಗಳೂರು, ಡಿ.19- ಮುನಿಸಿಕೊಂಡಿರುವ ವಾಲ್ಮೀಕಿ ಸಮುದಾಯವನ್ನು ತೃಪ್ತಿಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ , ಸಮುದಾಯದ ಸಚಿವ ಶ್ರೀರಾಮುಲುಗೆ ಸಂಪುಟದಲ್ಲಿ ಪ್ರಬಲ ಖಾತೆ ನೀಡಲು ಸಮ್ಮತಿಸಿದ್ದಾರೆ.

ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಪದವಿ ನೀಡಬೇಕೆಂದು ವಾಲ್ಮೀಕಿ ಸಮುದಾಯದ ಮಠಾಧೀಶರು ಹಾಗೂ ಅವರ ಅಭಿಮಾನಿಗಳು ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದಾರೆ.

ಈಗಾಗಲೇ ಮೂರು ಡಿಸಿಎಂಗಳು ಇರುವುದರಿಂದ ಮತ್ತೊಂದು ಡಿಸಿಎಂ ಸೃಷ್ಟಿಸಿದರೆ ವಿವಾದ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ಸಿಎಂ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ರಾಮುಲುಗೆ ಡಿಸಿಎಂ ಸ್ಥಾನ ಕೊಟ್ಟರೆ ನನ್ನನ್ನೂ ಕೂಡ ಉಪಮುಖ್ಯಮಂತ್ರಿ ಮಾಡುವಂತೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಹೀಗೆ ಒಂದೇ ಸಮುದಾಯದ ಇಬ್ಬರು ಪ್ರಭಾವಿ ನಾಯಕರು ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಖುದ್ದು ಯಡಿಯೂರಪ್ಪನವರಿಗೆ ಬಿಕ್ಕಟ್ಟು ಸೃಷ್ಟಿಸಿದೆ.

ಈಗಾಗಲೇ ವಾಲ್ಮೀಕಿ ಸಮುದಾಯ ಬಿಜೆಪಿ ಮತ್ತು ಸಿಎಂ ಮೇಲೆ ಮುನಿಸಿಕೊಂಡಿರುವುದರಿಂದ ಈ ಅಸಮಾಧಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರೀರಾಮುಲುಗೆ ಸಂಪುಟದಲ್ಲಿ ಮಹತ್ವದ ಖಾತೆ ನೀಡುವ ಮೂಲಕ ಭಿನ್ನಮತವನ್ನು ಶಮನಗೊಳಿಸಲು ಬಿಎಸ್‍ವೈ ಚಿಂತನೆ ನಡೆಸಿದ್ದಾರೆ.

ಈಗಾಗಲೇ ಸಂಪುಟದಲ್ಲಿ ರಾಮುಲುಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಜೊತೆಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಖಾತೆಯನ್ನು ವಹಿಸಲಾಗಿದೆ.

ಶ್ರೀರಾಮುಲು ಬಳಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಬದಲಾಯಿಸಿ ಲೋಕೋಪಯೋಗಿ ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯ ಖಾತೆಯನ್ನು ನೀಡುವ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ.

ಹಾಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಮ್ಮನ್ನು ಈ ಖಾತೆಯಿಂದ ವಿಮುಕ್ತಿ ಮಾಡುವಂತೆ ಖುದ್ದು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನನಗೆ ಸಮಾಜ ಕಲ್ಯಾಣ ಖಾತೆಯನ್ನು ನೀಡಿದರೆ ಅದನ್ನೇ ನಿಭಾಯಿಸಿಕೊಂಡು ಹೋಗುತ್ತೇನೆ. ಲೋಕೋಪಯೋಗಿ ಖಾತೆ ಬೇಡವೇ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲುಗೆ ಹುಣಸೂರು ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರಾಭವಗೊಂಡರೂ ಪಕ್ಷ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಕ್ಷೇತ್ರದಲ್ಲಿರುವ ವಾಲ್ಮೀಕಿ ಸಮುದಾಯ ಶ್ರೀರಾಮುಲು ನಾಯಕತ್ವಕ್ಕೆ ಮನ್ನಣೆ ನೀಡಿ ಬಿಜೆಪಿಗೆ ಮತ ಹಾಕಿದ್ದರು. ಅಲ್ಲದೆ ಉಪಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ, ಹಿರೇಕೆರೂರು, ರಾಣೆಬೆನ್ನೂರು, ಕೆ.ಆರ್.ಪೇಟೆ ಸೇರಿದಂತೆ ಮತ್ತಿತರ ಕಡೆಯೂ ಶ್ರೀರಾಮುಲು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

ಇಂದು ವಾಲ್ಮೀಕಿ ಸಮುದಾಯ ಬಿಜೆಪಿ ಜೊತೆ ಹೆಚ್ಚು ಗುರುತಿಸಿಕೊಂಡಿದೆ. ಒಂದು ವೇಳೆ ಡಿಸಿಎಂ ಸ್ಥಾನ ನೀಡದಿದ್ದರೆ ಸಮುದಾಯದ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಯವರು ಶ್ರೀರಾಮುಲು ಅವರಿಗೆ ಪ್ರಬಲ ಖಾತೆ ನೀಡಲು ಸಮ್ಮತಿಸಿದ್ದಾರೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲ ಸಚಿವರ ಖಾತೆ ಅದಲುಬದಲಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ