ಪಕ್ಷ ನಿಷ್ಠರು ಎಲ್ಲಿಗೆ ಹೋಗಬೇಕು- ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಡಿ.18-ಸಚಿವ ಸಂಪುಟ ವಿಸ್ತರಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸೇರಿದಂತೆ ಉಂಟಾಗಿರುವ ಭಿನ್ನಮತದ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಪಕ್ಷದ ಕಚೇರಿಯಲ್ಲಿ ಸುಮಾರು 20 ನಿಮಿಷಗಳ ಕಾಲ ನಳೀನ್‍ಕುಮಾರ್ ಕಟೀಲ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ರೇಣುಕಾಚಾರ್ಯ, ಪಕ್ಷದೊಳಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.

ಹಿರಿಯರನ್ನು ಕಡೆಗಣಿಸಿ ಕೆಲವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸರಿಯಲ್ಲ. ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಪರಾಭವಗೊಂಡಿದ್ದ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ಜೊತೆಗೆ ಸಾರಿಗೆ ಖಾತೆಯನ್ನು ನೀಡಲಾಗಿದೆ. ಇದು ಪಕ್ಷದಲ್ಲಿ ಅನೇಕ ಶಾಸಕರಿಗೆ ಅಸಮಾಧಾನ ಉಂಟು ಮಾಡಿದೆ ಎಂದು ರೇಣುಕಾಚಾರ್ಯ, ಕಟೀಲ್ ಅವರ ಬಳಿ ಪ್ರಸ್ತಾಪಿಸಿದ್ದಾರೆ.

ಮೂರು ಬಾರಿ ಗೆದ್ದಿರುವ ಉಮೇಶ್ ಕತ್ತಿ, ಎಸ್.ಅಂಗಾರ, ಹಾಲಾಡಿ ಶ್ರೀನಿವಾಸಶೆಟ್ಟಿ, ತಿಪ್ಪಾರೆಡ್ಡಿ, ಅರಗ ಜ್ಞಾನೇಂದ್ರ ಸೇರಿದಂತೆ ಅನೇಕ ಹಿರಿಯರನ್ನು ಕಡೆಗಣಿಸಿ ಸಂಪುಟ ವಿಸ್ತರಣೆ ಮಾಡಿದ್ದು ಸರಿಯಲ್ಲ. ಮೊದಲು ಈ ಅಸಮಾಧಾನವನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಯಾರಿಗೂ ಆಕ್ಷೇಪವಿಲ್ಲ. ಆದರೆ ಪಕ್ಷ ನಿಷ್ಠರನ್ನು ಕಡೆಗಣಿಸಿರುವುದು ಸರಿಯಲ್ಲ. ಮೊದಲು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾಗಿ ತಿಳಿದುಬಂದಿದೆ.

ಪಕ್ಷ ನಿಷ್ಠರು ಎಲ್ಲಿಗೆ ಹೋಗಬೇಕು: ಇನ್ನು ಮಾತುಕತೆ ಸಂದರ್ಭದಲ್ಲಿ ರೇಣುಕಾಚಾರ್ಯ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುವುದಾಗಲಿ, ಇಲ್ಲವೆ ಚುನಾವಣೆಯಲ್ಲಿ ಪರಾಭವಗೊಂಡ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಅವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ಪಕ್ಷನಿಷ್ಠರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಬಂದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂಬುದು ಸತ್ಯ. ಆದರೆ ಬಂದವರೆಲ್ಲರಿಗೂ ಮಂತ್ರಿ ಸ್ಥಾನ ನೀಡಿದರೆ ಉರಿದ ಬೆಂಕಿ ಇನ್ನಷ್ಟು ತುಪ್ಪ ಸುರಿದಂತಾಗುತ್ತದೆ. ಮೊದಲು ಇದನ್ನು ಸರಿಪಡಿಸಬೆಕಂದು ಆಗ್ರಹಿಸಿದರು.

ನಾವು ಯಾರೊಬ್ಬರೂ ಹೈಕಮಾಂಡ್ ನಿರ್ಧಾರವನ್ನಾಗಲಿ, ಮುಖ್ಯಮಂತ್ರಿಗಳ ತೀರ್ಮಾನವನ್ನಾಗಲಿ, ಇಲ್ಲವೇ ನಿಮ್ಮ ನಿರ್ಧಾರವನ್ನು ಪ್ರಶ್ನಿಸುತ್ತಿಲ್ಲ. ಶಾಸಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂಬುದೇ ನಮ್ಮ ಕಳಕಳಿ. ನಾನು ಮಾತ್ರ ನನ್ನ ಅಭಿಪ್ರಾಐ ವ್ಯಕ್ತಪಡಿಸಿದ್ದೇನೆ. ಅನೇಕ ಶಾಸಕರು ಒಳಗೊಳಗೇ ಕುದಿಯುತ್ತಿದ್ದಾರೆ. ಅಧ್ಯಕ್ಷರಾಗಿ ನೀವು ಕೂಡ ಸುಮ್ಮನಿದ್ದರೆ ಹೇಗೆ ಎಂದು ಕಟೀಲ್ ಮುಂದೆ ರೇಣುಕಾಚಾರ್ಯ ಅಸಮಾಧಾನ ಹೊರಹಾಖಿದರು.

ಕೆಲವು ಸಚಿವರು, ಶಾಸಕರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಕ್ಷೇತ್ರದ ಸಮಸ್ಯೆಗಳಿಗೂ ಸೂಕ್ತ ಸ್ಪಂದನೆ ಇಲ್ಲ. ಯಡಿಯೂರಪ್ಪ ಮತ್ತು ನಿಮ್ಮ ನಾಯಕತ್ವಕ್ಕಾಗಿ ಬಹುತೇಕರು ಸುಮ್ಮನಿದ್ದಾರೆ. ಕೆಲ ಸಚಿವ ಆಟಾಟೋಪಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ