ಬಹುಸಂಖ್ಯಾತರು ರೊಚ್ಚಿಗೆದ್ದರೆ ಏನಾಗುತ್ತದೆ-ಸಚಿವ ಸಿ.ಟಿ.ರವಿ

ಬೆಂಗಳೂರು, ಡಿ.18- ರಾಜ್ಯದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂಬ ಮಾಜಿ ಸಚಿವ ಖಾದರ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ಬಹುಸಂಖ್ಯಾತರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯು.ಟಿ.ಖಾದರ್ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ಅಲ್ಪಸಂಖ್ಯಾತರು ತಿರುಗಿಬಿದ್ದು ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಬಹುಸಂಖ್ಯಾತರು ತಿರುಗಿ ಬಿದ್ದರೆ ಏನಾಗುತ್ತದೆ ಎಂಬ ಅರಿವು ನಿಮಗಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.

ಖಾದರ್ ಅವರಂತಹ ಮನಸ್ಥಿತಿಯುಳ್ಳವರೇ ಗೋದ್ರಾದಲ್ಲಿ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಂಡರು. ಇವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ತಿರುಗಿಬಿದ್ದರೆ ನಾವು ಹೆದರಿಕೊಂಡು ಕೂರುವುದಿಲ್ಲ. ಯು.ಟಿ. ಖಾದರ್ ಹೇಳರುವುದು ಸಂವಿಧಾನ ವಿರೋಧಿ. ನಮ್ಮ ಬಹುಸಂಖ್ಯಾತರ ಸೌಜನ್ಯವನ್ನು ದೌರ್ಬಲ್ಯ ಎನ್ನುಕೊಳ್ಳಬಾರದು. ಇವರಂತೆ ನಾವು ತಿರುಗಿ ಬಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನೇರವಾಗಿ ಎಚ್ಚರಿಸಿದರು.

ಕಾಂಗ್ರೆಸ್‍ನವರು ಅಖಂಡಭಾರತ ಆದಾಗ ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗೂ ಪೌರತ್ವ ಕೊಡುತ್ತೇವೆ. ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಟ್ಟಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ನಿರಾಶ್ರಿತರೇ ಬೇರೆ ಒಳನುಸುಳುಕೋರರೇ ಬೇರೆ. ಹಾಗೂ ಅಕ್ರಮಣಕಾರರು ಬೇರೆ ಬೇರೆ ಎಂಬುದನ್ನು ಮಸೂದೆ ವಿರೋಧಿಸುವವರು ಅರ್ಥ ಮಾಡಿಕೊಳ್ಳಲಿ.

ನಾವು ನಿರಾಶ್ರಿತರಿಗೆ ಪೌರತ್ವ ಕೊಡುತ್ತಿದ್ದೇವೆ. ಖಾದರ್ ಅವರ ಹಕ್ಕನ್ನು ಕಿತ್ತುಕೊಂಡಿಲ್ಲ ಎಂದು ಟಾಂಗ್ ನೀಡಿದರು. ಖಾದರ್ ಪೌರತ್ವದ ಸಮಸ್ಯೆ ಇಲ್ಲ ಎಂದ ಮೇಲೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಆದರೆ ಪಾಕಿಸ್ತಾನದಿಂದ ಬಂದಿರುವ ಖಾದರ್ ಅವರ ಸಂಬಂಧಿಕರಿಗೆ ಪೌರತ್ವ ಕೊಡುವುದಿಲ್ಲ. ಭಾರತ ಎಂದಿಗೂ ಪಾಕಿಸ್ತಾನ ಮಾಡಲು ಬಿಡುವುದಿಲ್ಲ ಬೇಕಿದ್ದರೆ ಅವರೇ ಪಾಕ್‍ಗೆ ಹೋಗಲಿ ಎಂದು ತಿರುಗೇಟು ಕೊಟ್ಟರು.

ಹೆಸರು ಬದಲಾಯಿಸಲಿ: ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲೇಬೇಕು. ಈ ಸಂಬಂಧ ನಾನು ಸಿಎಂಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಸರ್ಕಾರದ ಹಣದಲ್ಲಿ ಕ್ಯಾಂಟೀನ್ ಮುಂದುವರೆಸುವುದಾದರೆ ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣೇಶ್ವರಿ ಹೆಸರಿಡಲಿ ಎಂದು ಸಿಎಂಗೆ ಮನವಿ ಮಾಡುತ್ತೇನೆ. ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲು ಸೂಕ್ತವಾಗಿದೆ. ಇಂದಿರಾ ಕ್ಯಾಂಟೀನ್ ಮುಚ್ಚಲೇಬೇಕು. ಅಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ದೂರಿದರು.

ಯಾರ ಬೀಗರಿಗೆ ಇಂದಿರಾ ಕ್ಯಾಂಟೀನ್ ಟೆಂಡರ್ ಕೊಟ್ಟಿದ್ದಾರೆ ಎಂಬುದನ್ನು ಕಾಂಗ್ರೆಸಿಗರು ನೋಡಿಕೊಳ್ಳಬೇಕು. ಹಣ ಕೊಳ್ಳೆ ಹೊಡೆಯುವುದಕ್ಕೆ ತಮಗೆ ಬೇಕಾದ ಬೀಗರಿಗೆ ಟೆಂಡರ್ ಕೊಟ್ಟಿದ್ದಾರೆ. ಕಾಂಗ್ರೆಸಿಗರು ಕೊಳ್ಳೆ ಹೊಡೆದ ದುಡ್ಡಿನಲ್ಲಿ ಊಟ ಹಾಕುವುದಾದರೆ ಹಾಕಲಿ ಅದು ಅವರು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗುತ್ತದೆ ಎಂದು ಕುಹುಕವಾಡಿದರು.

ಕಾಂಗ್ರೆಸಿರು ತಮ್ಮ ಸ್ವಂತ ಹಣದಲ್ಲಿ ರಾಜೀವ್ ಕ್ಯಾಂಟೀನ್ ಇಲ್ಲವೇ ನಾನ್‍ವೆಜ್ ಮಾಡಿ ಸೋನಿಯಾ ಗಾಂಧಿ ಕ್ಯಾಂಟೀನ್ ಹೆಸರಿಟ್ಟರೆ ನಮ್ಮದೇನು ತಕರಾರಿಲ್ಲ. ಸರ್ಕಾರದ ಹೆಸರಿನಲ್ಲಿ ಹೆಸರಿಡುವುದಾರೆ ಅನ್ನಪೂರ್ಣೇಶ್ವರಿ ಹೆಸರು ಸೂಕ್ತವಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ