ಮಳಿಗೆಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ-ಕನ್ನಡ ಬಳಸದ ಬೋರ್ಡ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಪ್ರಾರಂಭ

ಬೆಂಗಳೂರು, ಡಿ.18- ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸದ ಬೋರ್ಡ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದಿನಿಂದ ಪ್ರಾರಂಭಿಸಿದೆ.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬಿಬಿಎಂಪಿ ಅಧಿಕಾರಿ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ ನಾಮಫಲಕ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ನ.30ರೊಳಗೆ ನಗರದಲ್ಲಿರುವ ಮಳಿಗೆಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಿ ದಪ್ಪ ಅಕ್ಷರದಲ್ಲಿ ನಾಮಫಲಕ ಅಳವಡಿಸುವಂತೆ ಮೇಯರ್ ಗೌತಮ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು.

ಆದರೂ ಬಹಳಷ್ಟು ಅಂಗಡಿ ಮಳಿಗೆಗಳವರು ಇದನ್ನು ಪಾಲಿಸಿರಲಿಲ್ಲ. ಹಾಗಾಗಿ ನಾಮಫಲಕ ಬದಲಿಸದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು.

ಬಿಬಿಎಂಪಿಯ ನಿರ್ಧಾರಕ್ಕೆ ಎಫ್‍ಕೆಸಿಸಿಐ ಆಕ್ಷೇಪಿಸಿತ್ತು. ಇದಕ್ಕೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಗೌತಮ್‍ಕುಮಾರ್ ಪ್ರತಿಕ್ರಿಯಿಸಿದ್ದರು.

ಶೇ.60ರಷ್ಟು ಕನ್ನಡದಲ್ಲಿ ನಾಮಫಲಕ ಇರಬೇಕು. ಇಲ್ಲದಿದ್ದರೆ ವಾಣಿಜ್ಯ ಪರವಾನಗಿ ನವೀಕರಿಸುವುದಿಲ್ಲ ಎಂದು ಮೇಯರ್ ಎಚ್ಚರಿಸಿದ್ದರು. ಇದರಿಂದಾಗಿ ಕೆಲವರು ಎಚ್ಚೆತ್ತು ನಾಮಫಲಕ ಅಳವಡಿಸಿದ್ದರು. ಇನ್ನು ಕೆಲವರು ಮೇಯರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ನೀಡಿರಲಿಲ್ಲ.

ಹಾಗಾಗಿ ಇಂದು ಕನ್ನಡ ನಾಮಫಲಕ ಇಲ್ಲದ ಬೋರ್ಡ್‍ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾದರು.

ರೇಮಂಡ್ಸ್, ಕರ್ಲಾನ್ ಮತ್ತಿತರ ಪ್ರಮುಖ ಸಂಸ್ಥೆಗಳ ಮಳಿಗೆದಾರರು ಇನ್ನಷ್ಟು ಕಾಲಾವಕಾಶ ನೀಡುವಂತೆ ಈ ವೇಳೆ ಮನವಿ ಮಾಡಿದರು.

ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಮತ್ತೆ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿ ಬಿಬಿಎಂಪಿ ಅಧಿಕಾರಿಗಳು , ಮಾರ್ಷಲ್‍ಗಳ ನೆರವಿನಿಂದ ಕನ್ನಡ ಭಾಷೆ ಬಳಸದ ನಾಮಫಲಕಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದರು.

ಜನವರಿ ಆರಂಭದ ವೇಳೆಗೆ ಕನ್ನಡಕ್ಕೆ ಆದ್ಯತೆ ನೀಡದ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುತ್ತೇವೆ. ಕನ್ನಡಕ್ಕೆ ಪ್ರಾಧಾನ್ಯತೆ ನೀಡಲೇಬೇಕು. ಕೂಡಲೇ ತಮ್ಮ ಧೋರಣೆ ಬದಲಿಸಿ ಕನ್ನಡ ಫಲಕ ಹಾಕಲೇಬೇಕು . ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಗೌತಮ್‍ಕುಮಾರ್ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ