ಬೆಂಗಳೂರು,ಡಿ.17- ಒಂದೆಡೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಶಾಸಕರು ಮುಖ್ಯಮಂತ್ರಿ ಬಳಿ ನಿರಂತರ ಲಾಬಿ ನಡೆಸುತ್ತಿದ್ದರೆ, ಮತ್ತೊಂದೆಡೆ ಇರುವ ಮೂರು ಡಿಸಿಎಂ ಸ್ಥಾನವನ್ನು ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ದುರ್ಬಲವಾಗಿದ್ದರೆ ಮಾತ್ರ ಉಪಮುಖ್ಯಮಂತ್ರಿ ಸ್ಥಾನ ಅಗತ್ಯವಾಗಿರುತ್ತದೆ ಎಂದು ಟಾಂಗ್ ನೀಡಿದರು.
ಬಿ.ಎಸ್.ಯಡಿಯೂರಪ್ಪನವರು ಸಮರ್ಥ ನಾಯಕರು. ನಾಲ್ಕು ದಶಕಗಳ ಕಾಲ ಕರ್ನಾಟಕದಲ್ಲಿ ಹಾಗೂ ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತಹ ಸಮರ್ಥ ನಾಯಕತ್ವ ಇರುವಾಗ ಉಪಮುಖ್ಯಮಂತ್ರಿ ಹುದ್ದೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಹುದ್ದೆಗೆ ಯಾವುದೇ ಸಾಂವಿಧಾನಿಕ ಸ್ಥಾನಮಾನವಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಮೂರು ಡಿಸಿಎಂ ಹುದ್ದೆಗಳನ್ನು ವಜಾಗೊಳಿಸಬೇಕು. ಇದು ಪಕ್ಷದ ಹಿತದೃಷ್ಟಿಯಿಂದ ಒಳಿತೆಂದು ಅಭಿಪ್ರಾಯಪಟ್ಟರು.
2008ರಲ್ಲಿ 20 ತಿಂಗಳು ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ನಂತರ ಮೂರುವರೆ ವರ್ಷ ಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪನವರು ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿಗಳ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಅವರ ನಾಯಕತ್ವದ ಬಗ್ಗೆ ಯಾರಿಗೂ ಕಿಂಚಿತ್ತೂ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ನನ್ನ ಹೇಳಿಕೆಗೆ ಈಗಲೂ ಬದ್ದವಾಗಿದ್ದೇನೆ. ಯಾರನ್ನೂ ಗುರಿಯಾಗಿಟ್ಟುಕೊಂಡು ಮಾತನಾಡಿಲ್ಲ. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ದಾವಣಗೆರೆ ಜಿಲ್ಲೆಗೂ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.