ಬೆಂಗಳೂರು,ಡಿ.17-ಯಾವುದೇ ಸಂದರ್ಭಲ್ಲಾದರೂ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವ ಕಾರಣ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸಕ್ಕೆ ಎಡತಾಕುತ್ತಿದ್ದಾರೆ.
ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಇಂದು ಬೆಳಗ್ಗಿನಿಂದಲೇ ಬಿಜೆಪಿಯ ಅನೇಕ ಶಾಸಕರು ಆಗಮಿಸಿ ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ದುಂಬಾಲು ಬಿದ್ದಿದ್ದಾರೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಉಮೇಶ್ ಕತ್ತಿ, ಶಾಸಕರಾದ ಸೋಮಶೇಖರ ರೆಡ್ಡಿ, ವೆಂಕಟ ರೆಡ್ಡಿ ಮುದ್ನಾಳ್, ಎ.ಎಸ್.ನಡಹಳ್ಳಿ, ದೊಡ್ಡನಗೌಡ ಪಾಟೀಲ್ ಮತ್ತಿತರ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಮೊದಲು ಬಿ.ಎಸ್.ಯಡಿಯೂರಪ್ಪ ಅವರನ್ನು ಮರಾಠ ನಿಯೋಗ ಭೇಟಿಯಾಯಿತು. ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದಿರುವ ಶ್ರೀಮಂತ್ ಪಾಟೀಲ್ಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಮರಾಠ ಸಮುದಾಯ ಬಿಜೆಪಿಗೆ ಸಂಪೂರ್ಣವಾಗಿ ಬೆಂಬಲ ನೀಡಿದೆ. ಶ್ರೀಮಂತ ಪಾಟೀಲ್ಗೆ ಮಂತ್ರಿ ಸ್ಥಾನ ನೀಡುವುದರಿಂದ ನಮಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಇನ್ನೊಂದೆಡೆ ಉಪಚುನಾವಣೆ ಮುಗಿದ ಬಳಿಕ ನಿರಂತರವಾಗಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಮಾಜಿ ಸಚಿವ ಉಮೇಶ್ ಕತ್ತಿ ಕೂಡ ಇಂದು ಬಿಎಸ್ವೈ ಬಳಿ ಮಂತ್ರಿ ಸ್ಥಾನಕ್ಕೆ ಒತ್ತಡದ ತಂತ್ರ ಅನುಸರಿಸಿದ್ದಾರೆ.
ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಲೇಬೇಕೆಂದು ಪಟ್ಟು ಹಿಡಿದಿರುವ ಕತ್ತಿ ಈ ಬಾರಿ ತಮಗೆ ಸ್ಥಾನ ನೀಡದಿದ್ದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ತಮ್ಮ ಬೆಂಬಲಿಗರ ಮೂಲಕ ರವಾನಿಸಿದ್ದಾರೆ.
ರೆಡ್ಡಿ ಸಮುದಾಯಕ್ಕೂ ಆದ್ಯತೆ ಕೊಡಿ:
ಮತ್ತೊಂದೆಡೆ ಬಿಜೆಪಿಯಲ್ಲಿ ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ರೆಡ್ಡಿ ಸಮುದಾಯಕ್ಕೂ ಸಂಪುಟದಲ್ಲಿ ಆದ್ಯತೆ ನೀಡಬೇಕೆಂದು ಆ ಸಮುದಾಯದ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾದರು.
ರೆಡ್ಡಿ ಸಮುದಾಯದಿಂದ 6 ಮಂದಿ ಶಾಸಕರು ಬಿಜೆಪಿಯಲ್ಲಿ ಆಯ್ಕೆಯಾಗಿದ್ದಾರೆ. ಅವರಲ್ಲಿ ಯಾರಿಗಾದರೂ ಒಬ್ಬರಿಗೆ ನ್ಯಾಯ ಒದಗಿಸಬೇಕೆಂದು ಬಿಎಸ್ವೈರವರಲ್ಲಿ ಕೋರಿದ್ದಾರೆ.
ಶಾಸಕರಾದ ಎಸ್.ಎ.ನಡಹಳ್ಳಿ, ವೆಂಕಟರಾವ್ ಮುದ್ನಾಳ್, ದೊಡ್ಡನಗೌಡ ಪಾಟೀಲ್ ಮತ್ತಿತರರು ತಮ್ಮ ಸಮುದಾಯದ ಯಾವುದಾದರೊಬ್ಬ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಮನವಿಯನ್ನು ಸಲ್ಲಿಸಿದರು.
ಹೀಗೆ ಸಂಪುಟ ವಿಸ್ತರಣೆ ಯಾವುದೇ ವೇಳೆ ಆಗಬಹುದೆಂಬ ಹಿನ್ನಲೆಯಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ಮುಖ್ಯಮಂತ್ರಿಯ ಗಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ.