ಪೌರತ್ವ ತಿದ್ದುಪಡಿ ಮಸೂದೆ-ರಾಜ್ಯದಲ್ಲಿ ಜನವರಿ ತಿಂಗಳಿನಲ್ಲೇ ಅನುಷ್ಠಾನ

ಬೆಂಗಳೂರು,ಡಿ.17-ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜನವರಿ ತಿಂಗಳಿನಲ್ಲೇ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.

ನೂತನ ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲೇ ಸಂಸತ್‍ನ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕೃತವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಸೂದೆಗೆ ದೇಶದ ಅನೇಕ ಕಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಡೆ ಪಕ್ಷ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಿ ಪ್ರತಿಭಟನಾಕಾರರಿಗೆ ತಿರುಗೇಟು ನೀಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ.

ಹೀಗಾಗಿಯೇ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖುದ್ದು ದೂರವಾಣಿ ಕರೆ ಮಾಡುತ್ತಿರುವ ಮೋದಿ ಮಸೂದೆಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಅನುಷ್ಠಾನಗೊಳಿಸಿ ವಿರೋಧ ಪಕ್ಷಗಳವರು ಪ್ರತಿಭಟನೆ ನಡೆಸಲು ಅಸ್ತ್ರವೇ ಇಲ್ಲದಂತೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪನನವರಿಗೆ ದೂರವಾಣಿ ಕರೆ ಮಾಡಿದ್ದ ಮೋದಿ ಮಸೂದೆ ಅನುಷ್ಠಾನಗೊಳಿಸಲು ಇರುವ ಸಾಧಲ-ಬಾಧಕಗಳ ಬಗ್ಗೆ ಮಾಹಿತಿ ಪಡೆದಿದ್ದರು.

ಪ್ರಧಾನಿಯವರೇ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈಗಾಗಲೇ ಮಸೂದೆ ಜಾರಿ ಮಾಡುವ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದಾರೆ.

ಜನವರಿ ತಿಂಗಳ ಮೊದಲ ವಾರದಲ್ಲೇ ಮಸೂದೆಯನ್ನು ಜಾರಿ ಮಾಡಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಡಿ.20ರೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜನವರಿ ಮೊದಲ ವಾರದಲ್ಲೇ ಅನುಷ್ಠಾನಕ್ಕೆ ತರುವಂತೆ ನಿರ್ದೇಶನ ನೀಡಿದ್ದಾರೆ.

ವಲಸಿಗರಿಗೆ ಭೀತಿ:
ಒಂದು ವೇಳೆ ಕೇಂದ್ರ ಸರ್ಕಾರದ ಈ ಮಸೂದೆಯನ್ನು ಅನುಷ್ಠಾನಗೊಳಿಸಿದರೆ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್, ಇರಾನ್, ಸುಡಾನ್ ಸಿರಿಯಾ, ಮಧ್ಯಪ್ರಾಚ್ಯಸೇರಿದಂತೆ ಮತ್ತಿತರ ರಾಷ್ಟ್ರಗಳಿಂದ ವಲಸೆ ಬಂದಿರುವವರಿಗೆ ಈಗಾಗಲೇ ಗಡಿಪಾರು ಭೀತಿ ಆವರಿಸಿದೆ.

ಏಕೆಂದರೆ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ದಾವಣಗೆರೆ, ರಾಮನಗರ, ತುಮಕೂರು, ಚಿತ್ರದುರ್ಗ, ಬೀದರ್, ಗುಲ್ಬರ್ಗ, ಬೆಳಗಾವಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಬಂದು ನೆಲೆಸಿದ್ದಾರೆ.

ಇವರೆಲ್ಲರೂ ಭಾರತದ ಪ್ರಜೆಗಳೆಂದು ಸಾಬೀತುಪಡಿಸಬೇಕಾದರೆ ಕೆಲವು ದಾಖಲೆಗಳನ್ನು ಹಾಜರುಪಡಿಸಬೇಕು. ಒಂದು ವೇಳೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದಾಖಲೆಗಳನ್ನು ಸಾಬೀತುಪಡಿಸಲು ವಿಫಲರಾದರೆ ಅವರನ್ನು ತಮ್ಮ ತಮ್ಮ ರಾಷ್ಟ್ರಗಳಿಗೆ ಗಡಿಪಾರು ಮಾಡುವುದು ಅನಿವಾರ್ಯವಾಗುತ್ತದೆ.

ಇದೀಗ ಮಸೂದೆಯನ್ನು ಜಾರಿ ಮಾಡಲೇಬೇಕಾದ ಆತುರದಲ್ಲಿರುವ ರಾಜ್ಯ ಸರ್ಕಾರ ವಲಸಿಗರನ್ನು ಹಿಮ್ಮೆಟ್ಟಿಸಲು ಬಿಗಿಯಾದ ಕ್ರಮ ಕೈಗೊಳ್ಳುವ ಆತುರದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ