ಬೆಂಗಳೂರು,ಡಿ.17- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಚುನಾವಣೆಗಳು ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ ಸವಾಲೇ ಆಗಿರುತ್ತದೆ. ಸಾರ್ವತ್ರಿಕ ಚುನಾವಣೆಯಿರಲಿ, ಉಪ ಚುನಾವಣೆಯಿರಲಿ ಪಕ್ಷಗಳ ಸಾಮಥ್ರ್ಯವನ್ನು ಒರೆಗಲ್ಲಿಗೆ ಹಚ್ಚುವ, ಪಕ್ಷ ಮುನ್ನಡೆಸುವವರ ಪ್ರಭಾವವನ್ನು ಪರಿಗಣಿಸುವ ಮಾನದಂಡವೇ ಆಗಿರುತ್ತದೆ.
ಪ್ರತಿಯೊಂದು ಚುನಾವಣೆಗೂ ಪ್ರಮುಖ ರಾಜಕೀಯ ಪಕ್ಷಗಳು ಮಾಡಿಕೊಳ್ಳುವ ತಯಾರಿ, ಪೂರ್ವಭಾವಿ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ವೈಖರಿ, ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯುವ ತಂತ್ರ, ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಆಡುವ ತೂಕದ ಮಾತುಗಳು, ನಾಯಕರ ವರ್ತನೆಗಳು ಫಲಿತಾಂಶಕ್ಕೆ ಪೂರಕವಾಗಿರುತ್ತವೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಮಾಡಿಕೊಂಡ ಎಡವಟ್ಟು, ಸ್ವಯಂಕೃತ ಅಪರಾಧಗಳಿಂದ ಹೀನಾಯ ಸೋಲು ಅನುಭವಿಸಬೇಕಾಯಿತು.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದು ಪರಸ್ಪರ ಕಾಲೆಳೆದುಕೊಂಡು ಸೋಲು ಅನುಭವಿಸಿದ್ದ ಕಾಂಗ್ರೆಸ್-ಜೆಡಿಎಸ್ ವಿಧಾನಸಭೆ ಉಪಚುನಾವಣೆಯಲ್ಲಿ ಬೇರೆ ಬೇರೆಯಾಗಿಯೇ ಸ್ಪರ್ಧಿಸಿದ್ದರೂ ಪ್ರಚಾರದ ಸಂದರ್ಭದಲ್ಲಿ ಕೆಲವು ನಾಯಕರು ಮತ್ತೆ ಮೈತ್ರಿ ಪ್ರಸ್ತಾಪ ಮಾಡಿದ್ದು ಅವರಿಗೆ ಮುಳುವಾಯಿತು.
ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬರಲಿದೆ ಎಂಬ ಭಾವನೆ ಭಿತ್ತಿದರು. ಅಲ್ಲದೇ ಈ ಬಾರಿ ಕಾಂಗ್ರೆಸ್ನವರು ಸಿಎಂ ಆಗಲಿದ್ದಾರೆ ಎಂಬ ವದಂತಿ ಹರಡಿದರು. ಜೆಡಿಎಸ್ ನಾಯಕರು ಡಿ.9ರ ಫಲಿತಾಂಶದ ನಂತರ ಮತ್ತೆ ನಾವೇ ಕಿಂಗ್ಮೇಕರ್ ಎಂದು ಹೇಳಿದ್ದು, ಅಲ್ಲದೇ ಪ್ರಭಾವಿ ಕಾಂಗ್ರೆಸ್ ಮುಖಂಡರು ಡಿ.9ರ ನಂತರ ಸಿಹಿ ಸುದ್ದಿ ಕೊಡುತ್ತೇನೆ ಎಂದು ತಿಳಿಸಿದ್ದು ಮತದಾರರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಕೂಡ ನಾಯಕರ ಈ ವರ್ತನೆಯಿಂದ ಚದುರಿಹೋಯಿತು.
ಚುನಾವಣಾ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳು, ಟೀಕೆ-ಟಿಪ್ಪಣಿಗಳು ಸಹಜವಾಗಿರುತ್ತದೆ. ಎದುರಾಳಿ ಅಭ್ಯರ್ಥಿಗಳನ್ನು ಮಣಿಸಲು ಪ್ರಚಾರ ಭಾಷಣದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ತೀರಾ ವೈಯಕ್ತಿಕ ಮಟ್ಟಕ್ಕಿಳಿದು ಆರೋಪ ಮಾಡಿದ್ದು ಕೂಡ ವ್ಯತಿರಿಕ್ತ ಫಲಿತಾಂಶಕ್ಕೆ ಕಾರಣವಾಯಿತು.ಅಲ್ಲದೆ, ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದು ಕೂಡ ಬಿಜೆಪಿಗೆ ವರದಾನವಾಯಿತು.
ಮೊದಲೇ 14 ತಿಂಗಳ ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದರು. ಮೈತ್ರಿ ಸರ್ಕಾರದ ಧೋರಣೆ ವಿರೋಧಿಸಿ 17 ಜನ ಶಾಸಕರು ರಾಜೀನಾಮೆ ನೀಡಿ ಹೊರಬಂದಿದ್ದರು. ಇಂತಹ ಸಂದರ್ಭದಲ್ಲಿ ನಡೆದ ಉಪಚುನಾವಣೆಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಪ್ರಾದೇಶಿಕ ಪಕ್ಷ ಜೆಡಿಎಸ್ ತಮ್ಮ ಸ್ಥಾನಗಳನ್ನು ಪಡೆಯಲು ಅತ್ಯಂತ ಎಚ್ಚರಿಕೆ ಹೆಜ್ಜೆ ಇಡಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆಯಲ್ಲಿ ತುಂಬಾ ಎಡವಟ್ಟು ಮಾಡಿಕೊಂಡಿತ್ತು. ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿತ್ತು.
ಕೊನೆ ಕ್ಷಣದವರೆಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿರಲಿಲ್ಲ. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಮೂರು ವಾರ ಮುಂಚಿತವಾಗಿಯೇ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದರು. ರಾಜೀನಾಮೆ ನೀಡಿ ಹೊರಬಂದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ವೈಯಕ್ತಿಕ ವರ್ಚಸ್ಸು ಹೊಂದಿದವರೇ ಆಗಿದ್ದರು. ಅವರಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ಬಲ ಸಿಕ್ಕಿದರೆ ಗೆಲುವು ಸುಲಭ. ಅಂತಹ ಅಭ್ಯರ್ಥಿಗಳ ವಿರುದ್ಧ ಮತ್ತಷ್ಟು ಪ್ರಭಾವಿ ನಾಯಕರನ್ನು ಕಣಕ್ಕಿಳಿಸಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷ ಉಡಾಫೆ ಧೋರಣೆ ಅನುಸರಿಸಿತು ಎಂದು ಕಾಣುತ್ತದೆ. ಮತ್ತು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗರು ಮುನಿಸಿಕೊಂಡಿದ್ದು ಜಗಜ್ಜಾಹೀರಾಯಿತು.
ಈ ಸಂದರ್ಭದಲ್ಲಿ ಮತ್ತೆ ಮೂಲ, ವಲಸಿಗ ಎಂಬ ಫೈಟ್ ಶುರುವಾಯಿತು. ಚುನಾವಣಾ ದಿನಾಂಕ ಘೋಷಣೆಯಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡ ನಂತರ ಕಾಂಗ್ರೆಸ್ನ ಪ್ರಚಾರದಲ್ಲಿ ಒಗ್ಗಟ್ಟು ಕಾಣಲಿಲ್ಲ. ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದ ಮುಖಂಡರು ಪ್ರಚಾರದ ಸಂದರ್ಭದಲ್ಲಿ ದೂರ ಉಳಿದರು. ಕೊನೆಯ ಎರಡು ದಿನಗಳಲ್ಲಿ ಕಾಟಾಚಾರಕ್ಕೆ ಪ್ರಚಾರಕ್ಕೆ ಬಂದರು. ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗವೆಂಬಂತೆ ನಡೆದುಕೊಂಡರು. ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನು ತಪ್ಪು ಮಾಡಿದೆ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದು ಗೊಂದಲ ಮೂಡಿಸಿತು.
ಅದೇ ರೀತಿ ಕಾಂಗ್ರೆಸ್ನ ಅತ್ಯಂತ ಪ್ರಭಾವಿ ನಾಯಕ ಯಶವಂತಪುರದ ಸೋಮಶೇಖರ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಅಲ್ಲದೆ ಬಹುತೇಕ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿತ್ತು. ಇದಷ್ಟೇ ಅಲ್ಲ; ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರ ಹೇಳಿಕೆಗಳು ಮತದಾರರಲ್ಲಿ ಗೊಂದಲ ಮೂಡಿಸಿದವು. ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದು, ಮಾಧ್ಯಮಗಳಲ್ಲಿ ಜೋಡೆತ್ತಿನ ವಿಷಯ ಪ್ರಸ್ತಾಪವಾಗಿದ್ದು, ವಿರೋಧಿ ಮತಗಳ ಕ್ರೂಢೀಕರಣಕ್ಕೆ ಅವಕಾಶ ಮಾಡಿಕೊಟ್ಟಂತಾಯಿತು.
ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಕಾಂಗ್ರೆಸ್ ನಾಯಕರು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಕೇವಲ ರೋಡ್ ಶೋ, ರ್ಯಾಲಿಗಳಿಗೆ ಸೀಮಿತವಾದರು. ಇಲ್ಲಿ ಬಂದ ಜನ ಸಾಗರ ಮತವಾಗಿ ಪರಿವರ್ತನೆಯಾಗಲಿಲ್ಲ. ಬೆಳೆಯುವ ಹಾಗೂ ಬೆಳೆಸುವ ರಾಜಕಾರಣಕ್ಕಿಂತ ತುಳಿಯುವ ರಾಜಕಾರಣವೇ ಮೇಲಾದ್ದರಿಂದ ಕಂಡು ಕೇಳರಿಯದ ಸೋಲು ಅನುಭವಿಸಬೇಕಾಯಿತು.
ಒಟ್ಟಾರೆ ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು. ಜೆಡಿಎಸ್ ಪಕ್ಷದ ಭದ್ರ ಕೋಟೆ ಮಂಡ್ಯದಲ್ಲಿ ಬಿಜೆಪಿ ಅರಳುವ ಮೂಲಕ ಹೊಸ ಶಕೆಗೆ ಮುನ್ನುಡಿ ಬರೆಯಿತು. ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನ ಖಾತೆಯನ್ನು ತೆರೆಯಿತು. ಇವೆಲ್ಲವನ್ನು ಗಮನಿಸಿದರೆ ಮತದಾರರು ಮತ್ತು ಕಾರ್ಯಕರ್ತರು ಜೆಡಿಎಸ್ನಿಂದ ದೂರ ಸರಿಯುತ್ತಿದ್ದಾರೇನೋ ಎಂದು ಗೋಚರಿಸುತ್ತದೆ.
ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದರಿಂದ ಪ್ರಭಾವಿ ನಾಯಕ ಸಿದ್ದರಾಮಯ್ಯ ತಮ್ಮ ಪ್ರತಿ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಸ್ಥಿರ ಸರ್ಕಾರಕ್ಕೆ ಅವಕಾಶವಾಯಿತು. ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಮತ್ತಷ್ಟು ಗಟ್ಟಿಯಾಯಿತು.