ಫಲಿತಾಂಶದಲ್ಲಿ ಶೂನ್ಯ ಸಂಪಾದನೆ ಹಿನ್ನಲೆ-299 ಪದವಿಪೂರ್ವ ಕಾಲೇಜುಗಳಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಬೀಗಮುದ್ರೆ

ಬೆಂಗಳೂರು,ಡಿ.16-ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಅನುದಾನ ಮತ್ತು ಅನುದಾನ ರಹಿತ ಸೇರಿದಂತೆ ಒಟ್ಟು 299 ಪದವಿಪೂರ್ವ ಕಾಲೇಜುಗಳಿಗೆ ನೀಡಲಾಗಿರುವ ಅನುಮತಿಯನ್ನು ರದ್ದುಪಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಶ್ವತ ಬೀಗ ಜಡಿಯುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ.

ಇದರಲ್ಲಿ ಪ್ರಮುಖವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ 54, ಬೆಂಗಳೂರು ಉತ್ತರ 35, ಮೈಸೂರು 16, ತುಮಕೂರು 15 ಸೇರಿದಂತೆ 299 ಕಾಲೇಜುಗಳು ಬಂದ್ ಆಗಲಿವೆ.

ಕಳೆದ ಐದು ವರ್ಷಗಳಿಂದ ಈ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಹೀಗಾಗಿ ಇಲಾಖೆಯು ಕಾರಣ ಕೇಳಿ ಅನುದಾನ ಮತ್ತು ಅನುದಾನರಹಿತ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಸರ್ಕಾರದಿಂದ ಅನುದಾನ ಪಡೆದು ಫಲಿತಾಂಶದಲ್ಲಿ ಶೂನ್ಯ ಸಂಪಾದನೆ ಮಾಡಲು ಕಾರಣವೇನು? ಸುಧಾರಣೆ ಮಾಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ? ನಿಮ್ಮ ಕಾಲೇಜಿಗೆ ನೀಡಿರುವ ಅನುಮತಿಯನ್ನು ಏಕೆ ರದ್ದುಪಡಿಸಬಾರದೆಂದು ನೋಟಿಸ್‍ನಲ್ಲಿ ಕೇಳಲಾಗಿತ್ತು.

ನೋಟಿಸ್ ನೀಡಿ ಹಲವು ದಿನಗಳಾಗಿದ್ದರೂ ಆಡಳಿತ ಮಂಡಳಿಯಿಂದ ಯಾವುದೇ ಉತ್ತರ ಬರಲಿಲ್ಲ. ಪುನಃ ಇದಕ್ಕೆ ನೋಟಿಸ್ ನೀಡಿ ಉತ್ತರಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿತ್ತು.

ಇಷ್ಟಾದರೂ ಹಲವು ನೋಟಿಸ್‍ಗಳಿಗೆ ಯಾವುದೇ ಉತ್ತರ ಬಾರದ ಕಾರಣ ಶೂನ್ಯ ಫಲಿತಾಂಶ ಪಡೆಯುವ ಕಾಲೇಜುಗಳಿಗೆ ಬೀಗ ಹಾಕುವಂತೆ ಸೂಚನೆ ಕೊಡಲಾಗಿದೆ.
ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳಿಗೆ ಪೆÇೀಷಕರು ತಮ್ಮ ಮಕ್ಕಳನ್ನು ದಾಖಲಿಸಬಾರದು. ಈ ಸಂಬಂಧ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿಕೊಡುವಂತೆ ಸೂಚನೆ ಕೊಡಲಾಗಿದೆ.

ಬೀಗ ಹಾಕುವ ಕಾಲೇಜುಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ರಾಜ್ಯದಲ್ಲಿ ಒಟ್ಟು 5397 ಪದವಿಪೂರ್ವ ಕಾಲೇಜುಗಳಿವೆ. 3,394 ಖಾಸಗಿ ಅನುದಾನ, 1,232 ಸರ್ಕಾರಿ, 797 ಅನುದಾನ, 161 ಸಂಯುಕ್ತ ಹಾಗೂ 13 ಕಾಪೆರ್Çೀರೇಷನ್ ಕಾಲೇಜುಗಳಿವೆ.

ಫಲಿತಾಂಶವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಅವಧಿವರೆಗೆ ರಾಜ್ಯ ಸರ್ಕಾರ ಯಾವುದೇ ನೂತನ ಕಾಲೇಜುಗಳನ್ನು ಆರಂಭಿಸಲು ಖಾಸಗಿಯವರಿಗೆ ಅನುಮತಿ ನೀಡಬಾರದೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನು ಮುಂದೆ ಸರ್ಕಾರ ನಿಗದಿಪಡಿಸಿದ ಫಲಿತಾಂಶ ಬಾರದ ಕಾಲೇಜುಗಳಿಗೆ ಅನುದಾನ ಕಡಿತ ಮಾಡುವ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಜಿಲ್ಲಾವಾರು ವಿವರ
ಬೆ.ದಕ್ಷಿಣ -54
ಬೆ.ಉತ್ತರ-35
ಮೈಸೂರು- 16
ತುಮಕೂರು- 15
ಬೀದರ್-13
ದಾವಣಗೆರೆ-12
ಧಾರವಾಡ-11
ಚಿತ್ರದುರ್ಗ-11
ವಿಜಯಪುರ -10
ಚಿಕ್ಕಬಳ್ಳಾಪುರ-10
ಹಾಸನ-10

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ