ಅಬಕಾರಿ ಇಲಾಖೆ 10,000 ಕೋಟಿ ರಾಜಸ್ವ ಸಂಗ್ರಹಿಸುವಲ್ಲಿ ಹಿನ್ನಡೆ

ಬೆಂಗಳೂರು,ಡಿ.16- ಅಬಕಾರಿ ಇಲಾಖೆಯಲ್ಲಿನ ಹುದ್ದೆಗಳ ಮರುವಿನ್ಯಾಸಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗಿರುವುದು ಸರ್ಕಾರದ ಬೊಕ್ಕಸದ ಮೇಲೆ ಭಾರೀ ಪರಿಣಾಮ ಬೀರಿದೆ.

ಪ್ರಸಕ್ತ ವರ್ಷ ಅಬಕಾರಿ ಇಲಾಖೆಗೆ 2020 ಜೂನ್ ತಿಂಗಳ ಅಂತ್ಯಕ್ಕೆ 20,500 ಕೋಟಿ ರಾಜಸ್ವ ಸಂಗ್ರಹ ಮಾಡುವಂತೆ ಗುರಿ ನೀಡಲಾಗಿತ್ತು.

ಬಜೆಟ್ ಮಂಡನೆಯಾಗಿ ಈಗಾಗಲೇ 6 ತಿಂಗಳು ಕಳೆದಿದ್ದರೂ ಅಬಕಾರಿ ಇಲಾಖೆ 10,000 ಕೋಟಿ ರಾಜಸ್ವ ಸಂಗ್ರಹಿಸುವಲ್ಲಿ ಹಿನ್ನಡೆಯಾಗಿದೆ.

ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಪ್ರತಿ ವರ್ಷ ಇಲಾಖೆಯು ಒಟ್ಟು ಶೇ.70ಕ್ಕಿಂತಲೂ ಅಧಿಕ ರಾಜಸ್ವ ಸಂಗ್ರಹ ಮಾಡುತ್ತಿತ್ತು.

ಆದರೆ ಇದೇ ಮೊದಲ ಬಾರಿಗೆ ಅಬಕಾರಿ ಇಲಾಖೆ ನಿರೀಕ್ಷಿತ ಮಟ್ಟದಲ್ಲಿ ರಾಜಸ್ವ ಸಂಗ್ರಹಣೆ ಮಾಡದಿರಲು ಇಲಾಖೆಯ ಆಯಾಕಟ್ಟಿನಲ್ಲಿರುವ( ಒಂದೇ ಸಮುದಾಯದ) ಕೆಲವು ಅಧಿಕಾರಿಗಳೇ ಕಾರಣ ಎಂದು ತಿಳಿದುಬಂದಿದೆ.

ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲು ಕೆಲವೇ ದಿನಗಳು ಇರುವಾಗ ಒಂದೇ ರಾತ್ರಿಯಲ್ಲೇ ವರ್ಗಾವಣೆಗೊಂಡು ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ಈ ಅಧಿಕಾರಿಗಳ ಸ್ವಾರ್ಥವೇ ಇದಕ್ಕೆ ಕಾರಣ ಎಂಬುದು ಗೊತ್ತಾಗಿದೆ.

ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಇಲಾಖೆಯು ಪ್ರತಿ ವರ್ಷ ಉದ್ದೇಶಿತ ಗುರಿಗಿಂತಲೂ ಹೆಚ್ಚಿನ ಆದಾಯವನ್ನು ನೀಡುತ್ತಿತ್ತು.

20,500 ಕೋಟಿ ಗುರಿ ನೀಡಿದ್ದರೂ ಅದಕ್ಕಿಂತಲೂ ಹೆಚ್ಚು ಸರಿಸುಮಾರು 23ರಿಂದ 25 ಸಾವಿರ ಕೋಟಿ ರಾಜಸ್ವ ಸಂಗ್ರಹಣೆ ನಿರೀಕ್ಷೆ ಇರುತ್ತಿತ್ತು.
ಕಾರಣವೇನು?

ಇಲಾಖೆಯಲ್ಲಿ ವರಮಾನ ಹೆಚ್ಚಳ , ಗ್ರಾಹಕರಿಗೆ ಗುಣಮಟ್ಟದ ಮದ್ಯಪೂರೈಕೆ ಹಾಗೂ ನಕಲಿ ಮದ್ಯ ಹಾವಳಿ ತಡೆಯಲು ಹಾಲಿ ಅಬಕಾರಿ ಸಚಿವರಾಗಿರುವ ಎಚ್.ನಾಗೇಶ್ ಅವರು ಹುದ್ದೆಗಳ ಮರು ವಿನ್ಯಾಸ ಮಾಡಲು ಮುಂದಾಗಿದ್ದರು.

ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಿಭಾಗಕ್ಕೆ ಹಾಲಿ ಇರುವ 4 ಅಬಕಾರಿ ಡಿಸಿಗಳ ಜೊತೆಗೆ ಹೆಚ್ಚುವರಿಯಾಗಿ 4 ಡಿಸಿ, ಅಬಕಾರಿ ಉಪ ಆಯುಕ್ತರು ಸೇರಿದಂತೆ ಮತ್ತಿತರ ಕೆಲವು ಹುದ್ದೆಗಳನ್ನು ಮರುವಿನ್ಯಾಸ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವುದರಿಂದ ಇಲಾಖೆಯಲ್ಲಿ ನಡೆಯುವ ಗೋಲ್‍ಮಾಲ್ ತಡೆಗಟ್ಟುವುದು, ಸೆಕೆಂಡ್ಸ್ ದಂಧೆಗೆ ಕಡಿವಾಣ, ವಿಚಕ್ಷಣ ಮತ್ತು ಜಾರಿ ದಳವನ್ನು ಬಲಪಡಿಸಲು ಅನುಕೂಲವಾಗುತ್ತದೆ ಎಂಬುದು ಸಚಿವರ ಉದ್ದೇಶವಾಗಿತ್ತು.

ರಾಜಧಾನಿ ಬೆಂಗಳೂರಿನಲ್ಲಿ 48 ವಲಯಗಳಿದ್ದು ಹಾಲಿ ಇರುವ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗಿತ್ತು.

ಸಿಬ್ಬಂದಿ ಹೆಚ್ಚಳವಾದರೆ ಇಲಾಖೆಗೆ ಹೆಚ್ಚಿನ ವರಮಾನ ಸಂಗ್ರಹಿಸಲು ಅನುಕೂಲವಾಗಲಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹುದ್ದೆಗಳ ಮರುವಿನ್ಯಾಸಕ್ಕೆ ತೀರ್ಮಾನಿಸಲಾಗಿತ್ತು.

ಅಡ್ಡಿಯಾದ ಅಧಿಕಾರಿಗಳು:
ಒಂದು ವೇಳೆ ಅಧಿಕಾರಿಗಳ ಮರುವಿನ್ಯಾಸವಾದರೆ ತಮ್ಮ ಮೂಲ ಆದಾಯಕ್ಕೆ ಎಲ್ಲಿ ಹೊಡೆತ ಬೀಳಬಹುದೆಂಬ ಆತಂಕದಿಂದ ಕೆಲವರು ಇದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸದ ಇಲಾಖೆಯ ಪ್ರಮುಖರೊಬ್ಬರು ತಿಳಿಸಿದ್ದಾರೆ.

ವಲಯಗಳನ್ನು ವಿಂಗಡಿಸಿಕೊಂಡಿರುವ ಅಧಿಕಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಮೂಲ ಆದಾಯ ಕೈ ಕೊಡಬಹುದೆಂಬ ಭೀತಿಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ರಾಜಸ್ವ ಸಂಗ್ರಹಕ್ಕೆ ಕೊರತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಹುದ್ದೆಗಳ ಮರು ವಿನ್ಯಾಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಮ್ಮತಿ ನೀಡಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಕೂಡ ಅನುಮತಿಯನ್ನು ನೀಡಿತ್ತು. ಕೊನೆ ಕ್ಷಣದಲ್ಲಿ ಕಾಣದ ಕೈಗಳ ಕೈವಾಡದಿಂದ ಇದು ನೆನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.

ಆದಾಯಕ್ಕೆ ಖೋತಾ:
ಅಧಿಕಾರಿಗಳ ಈ ಕಣ್ಣಾಮುಚ್ಚಾಲೆ ಆಟದಿಂದ ಅಬಕಾರಿ ಇಲಾಖೆಯ ಆದಾಯಕ್ಕೆ ಭಾರೀ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

2018-19ರ ಬಜೆಟ್‍ನಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 2020ರ ಜೂನ್ ಅಂತ್ಯಕ್ಕೆ ಅಬಕಾರಿ ಇಲಾಖೆಯಿಂದ 20,500 ಕೋಟಿ ಆದಾಯವನ್ನು ನಿರೀಕ್ಷೆ ಮಾಡಿರುವುದಾಗಿ ಘೋಷಿಸಿದ್ದರು.

ಸಾಮಾನ್ಯವಾಗಿ ಸರ್ಕಾರ ನೀಡುವ ಗುರಿಯನ್ನು ಮೀರಿ ಅಬಕಾರಿ ಇಲಾಖೆ ಆದಾಯ ನೀಡುವುದು ಸರ್ವೆ ಸಾಮಾನ್ಯ. ಆದರೆ ಆರು ತಿಂಗಳು ಕಳೆದರೂ ಈವರೆಗೆ 10 ಸಾವಿರ ಕೋಟಿಗೂ ಕಡಿಮೆ ವರಮಾನ ಬಂದಿದೆ ಎನ್ನಲಾಗುತ್ತಿದೆ.

ಅದರಲ್ಲೂ ಈ ಬಾರಿ ರಾಜ್ಯದ ನಾನಾ ಭಾಗಗಳಲ್ಲಿ ಭೀಕರ ಪ್ರಹಾರ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರಿಯನ್ನೂ ಮೀರಿ ಆದಾಯ ನೀಡಬೇಕೆಂದು ಸೂಚನೆ ಕೊಟ್ಟಿದ್ದರು.

ಆದರೆ ಅಧಿಕಾರಿಗಳ ರಾಮನ ಲೆಕ್ಕ, ಕೃಷ್ಣನ ಲೆಕ್ಕದಿಂದ ಅಬಕಾರಿಯಿಂದ ನಿರೀಕ್ಷಿಸಿದ್ದ ಆದಾಯವೂ ಹುಸಿಯಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ರಾಜ್ಯದ ಬೊಕ್ಕಸಕ್ಕೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಮುಂದಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಬಕಾರಿ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾದರೆ ವರಮಾನ ಹೆಚ್ಚಳ ಸಾಧ್ಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಇಲಾಖೆಯಲ್ಲಿ ಕೆಲವು ಸುಧಾರಣೆ ತರಲು ಸಚಿವರಾದ ನಾಗೇಶ್ ಮುಂದಾಗಿದ್ದಾರೆ. ಆದರೆ ಅವರ ವೇಗಕ್ಕೆ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂಬ ಆಪಾದನೆಗಳು ಕೇಳಿಬರುತ್ತಿವೆ.

ಇಲಾಖೆಯಲ್ಲಿ ಒಂದಿಷ್ಟು ಸುಧಾರಣೆ ಮಾಡಬೇಕೆಂಬ ಆಶಯ ಸಚಿವರದ್ದು. ಇದಕ್ಕೆ ತದ್ವಿರುದ್ದ ಎಂಬಂತೆ ಅಧಿಕಾರಿಗಳು ಪ್ರತಿಯೊಂದಕ್ಕೂ ಅಡ್ಡಿಪಡಿಸುತ್ತ ತಮ್ಮ ಮೂಲ ಆದಾಯದ ಕಡೆ ಹೆಚ್ಚು ಗಮನಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ