ನವದೆಹಲಿ, ಡಿ.13- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪೌರತ್ವ ತಿದ್ದುಪಡಿ ಮಸೂದೆ-2019ಕ್ಕೆ ಸಮ್ಮತಿ ನೀಡಿದ್ದು, ಅದು ಅಧಿಕೃತವಾಗಿ ಕಾಯ್ದೆಯಾಗಿ ಜಾರಿಗೆ ಬರಲಿದೆ.
ಸರ್ಕಾರದ ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾಗುವ ಮೂಲಕ ಕಾಯ್ದೆ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ.
ಈ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಅಲ್ಲಿ ಬದುಕಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಬಯಸಿ ಡಿಸೆಂಬರ್ 31, 2014ರವರೆಗೆ ಬಂದ ಹಿಂದೂ, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವ ನೀಡುವುದಾಗಿದೆ. ಇದರಿಂದ ಅವರು ಅಕ್ರಮ ವಲಸಿಗರು ಎನಿಸುವುದಿಲ್ಲ.
ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ನಡುವೆ ಕಳೆದ ಸೋಮವಾರ ಲೋಕಸಭೆಯಲ್ಲಿ ಹಾಗೂ ಬುಧವಾರ ರಾಜ್ಯಸಭೆಯಲ್ಲಿ ಅನುಮೋದನೆ ಲಭಿಸಿತ್ತು.