ಬ್ರಿಟನ್ ಬೋರಿಸ್ ಜಾನ್ಸನ್ ಪ್ರಧಾನಮಂತ್ರಿಯಾಗಿ ಪುನರಾಯ್ಕೆ

ಲಂಡನ್, ಡಿ.13-ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗುವುದು ಖಚಿತವಾಗಿದೆ ಎಂದು ಚುನಾವಣೋತ್ತರ ಸಮೀಕ್ಷೆಯೊಂದು ಹೇಳಿದೆ.

ಈ ಜಯಭೇರಿಯೊಂದಿಗೆ ಬ್ರೆಕ್ಸಿಟ್(ಬ್ರಿಟನ್ ಎಗ್ಸಿಟ್-ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವಿಕೆ) ವಿಷಯದಲ್ಲಿ ಇಂಗ್ಲೆಂಡ್‍ನಲ್ಲಿ ತಲೆದೋರಿದ್ದ ಅನಿಶ್ಚಿತತೆ ಕೊನೆಗೊಳ್ಳಲಿದೆ. ಅಲ್ಲದೇ ಮುಂದಿನ ತಿಂಗಳು ಯುರೋಪ್ ಸಮುದಾಯದಿಂದ ಯುನೈಟೆಡ್ ಕಿಂಗ್‍ಡಂನನ್ನು ಪ್ರತ್ಯೇಕಗೊಳಿಸಲು ಬೋರಿಸ್ ಜಾನ್ಸನ್‍ಗೆ ಸಹಕಾರಿಯಾಗಲಿದೆ.

ಬಿಬಿಸಿ/ಟಟಿವಿ/ಸ್ಕೈ ಎಗ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಜಾನ್ಸನ್ ನೇತೃತ್ವದ ಕನ್ಸರ್‍ವೇಟಿವ್ ಪಾರ್ಟಿ, ಲೇಬರ್ ಪಕ್ಷದ ವಿರುದ್ಧ ಭಾರೀ ಅಂತರದಿಂದ ಮೇಲುಗೈ ಸಾಧಿಸಿದೆ. 2016ರ ಜನಾದೇಶದಲ್ಲಿ ಉತ್ತರ ಇಂಗ್ಲೆಂಡ್ ಮತ್ತು ವೇಲ್ಸ್‍ನಲ್ಲಿ ಹಿಡಿತ ಸಾಧಿಸಿದ್ದ ಲೇಬರ್ ಪಾರ್ಟಿಗೆ ಈ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.

ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ, ಗ್ರೇಟ್ ಬ್ರಿಟನ್ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಬ್ರೆಕ್ಸಿಟ್ ಜಾರಿಗೆ ಇದು ಮತದಾರರು ನೀಡಿದ ಪ್ರಬಲ ಹೊಸ ಜನಾದೇಶ ಎಂದು ಬಣ್ಣಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ