ನವದೆಹಲಿ, ಡಿ.13-ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಅತಿ ಶೀಘ್ರ ಗಲ್ಲು ಶಿಕ್ಷೆಯಾಗಬೇಕೆಂದು(ಡೆತ್ವಾರೆಂಟ್) ಕೋರಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯ ಡಿ.18ಕ್ಕೆ ಮುಂದೂಡಿದೆ.
ಇದರಿಂದಾಗಿ ನಿರ್ಭಯಾ ಪ್ರಕರಣದ ವಿಕೃತ ಕಾಮುಕರಾದ ಮುಕೇಶ್, ಅಕ್ಷಯ್, ವಿನಯ್ ಮತ್ತು ನವೀನ್ ಗಲ್ಲು ಶಿಕ್ಷೆ ಸ್ವಲ್ಪ ವಿಳಂಬವಾಗಲಿದೆ.
ಮರಣದಂಡನೆ ತೀರ್ಪು ಪರಾಮರ್ಶಿಸುವಂತೆ ಕೋರಿ ಈ ನಾಲ್ವರು ಅಪಾದಿತರಲ್ಲಿ ಅಕ್ಷಯ್ ಸಲ್ಲಿಸಿರುವ ಅರ್ಜಿ ವಿಚಾರಣೆ ಡಿ.17ರಂದು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಕೋರ್ಟ್ ನಿರ್ಭಯಾ ಪೋಷಕರ ಅರ್ಜಿ ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿದೆ.
ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಮರ್ಡರ್ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧೆಡೆ ಯುವತಿಯರು ಮತ್ತು ಮಹಿಳೆಯರ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್ಗೆ ಖುದ್ದಾಗಿ ಹಾಜರುಪಡಿಸಿದರೆ ಅಪಾದಿತ ಜೀವಕ್ಕೆ ತೊಂದರೆಯಾಗುತ್ತದೆ ಎಂಬ ಭದ್ರತಾ ಕಾರಣಗಳಿಂದಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಈ ನಾಲ್ವರು ಅಪರಾಧಿಗಳಿಗೆ ಆದಷ್ಟು ಶೀಘ್ರ ನೇಣು ಶಿಕ್ಷೆ ವಿಧಿಸುವಂತೆ ನಿರ್ಭಯಾ ಪೋಷಕರು ಕೋರ್ಟ್ ಮನವಿ ಮಾಡಿದ್ದಾರೆ. ಇವರ ವಕೀಲೆ ಸೀಮಾ ಖುಷ್ಹವಾ ವಕಾಲತ್ತು ವಹಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಡಿ.17ರಂದು ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ಅಕ್ಷಯ್ ಸಲ್ಲಿಸಿರುವ ಗಲ್ಲು ಶಿಕ್ಷೆ ಪರಾಮರ್ಶೆ ಮನವಿ ಅರ್ಜಿಯ ವಿಚಾರಣೆ ಇದೆ. ಈ ಹಿನ್ನೆಲೆಯಲ್ಲಿ ಸರ್ವೋನ್ನತ ನ್ಯಾಯಾಲಯದ ತೀರ್ಪು ಹೊರಬಂದ ನಂತರ ಡಿ.18ರಂದು ನಿರ್ಭಯಾ ಪೋಷಕರ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ ಎಂದು ತಿಳಿಸಿದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸತೀಶ್ ಕುಮಾರ್ ಅರೋರಾ, ನ.20ರಂದು ಈ ಪ್ರಕರಣದ ವಿಚಾರಣೆ ನಡೆಸಿ, ಡಿ.13ರಂದು (ಇಂದು) ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿವಂತೆ ಸೂಚಿಸಿದ್ದರು. ಕ್ಷಮಾದಾನ ಅರ್ಜಿ ಮತ್ತು ಅದಕ್ಕೆ ಸಂಬಂಧಪಟ್ಟ ವಿವರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ತಿಳಿಸಿದ್ದರು.
ಡಿಸೆಂಬರ್ 16, 2012ರಂದು ರಾತ್ರಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಪೈಶಾಚಿಕ ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿ ಕೊಲ್ಲಲಾಗಿತ್ತು.