ಸಂಸತ್ ಭವನದ ಮೇಲೆ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 18 ವರ್ಷ

ನವದೆಹಲಿ, ಡಿ.13- ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನಿ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 18 ವರ್ಷಗಳು.

ಡಿ.13, 2001ರಂದು ರಾಜಧಾನಿ ದೆಹಲಿಯಲ್ಲಿ ಪಾರ್ಲಿಮೆಂಟ್ ಮೇಲೆ ಜೈಷ್-ಎ-ಮಹಮದ್ ಭಯೋತ್ಪಾದಕರು ದಾಳಿ ನಡೆಸಿದರು. ಆರು ಮಂದಿ ಪೋಲೀಸರು ಸೇರಿದಂತೆ ಒಟ್ಟು ಒಂಭತ್ತು ಮಂದಿ ಭಯೋತ್ಪಾದಕರ ಕೌರ್ಯಕ್ಕೆ ಬಲಿಯಾಗಿ, 22 ಮಂದಿ ತೀವ್ರ ಗಾಯಗೊಂಡಿದ್ದರು. ಭದ್ರತಾಪಡೆಗಳು ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫಲರಾದರು.

ಸಂಸತ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹುತಾತ್ಮ ಪೋಲೀಸರು ಮತ್ತು ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪರವಾಗಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಯೋಧರು ಮತ್ತು ಪೋಲೀಸರ ತ್ಯಾಗವನ್ನು ನಾವು ಸ್ಮರಿಸುತ್ತೇವೆ ಎಂದು ಗುಣಗಾನ ಮಾಡಿದ್ದಾರೆ.

ಕೇಂದ್ರ ಸಚಿವರಾದ ರವಿಶಂಕರ್‍ಪ್ರಸಾದ್, ಹರ್‍ದೀಪ್ ಪುರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಜಿ ಪ್ರಧಾನಿ ಡಾ.ಮನ್‍ಮೋಹನ್‍ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಸಂಸದ ರಾಹುಲ್‍ಗಾಂಧಿ ಮೊದಲಾದವರು ಸಹ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸಿದ್ದಾರೆ.

ಭಾರತದ ಪಾಲಿಗೆ ಡಿ.13, 2001 ಕರಾಳ ದಿನ. ಪಾಕಿಸ್ತಾನ ಪ್ರೇರಿತ ಲಷ್ಕರ್-ಎ-ತೊಯ್ಬ ಮತು ಜೈಷ್-ಎ-ಮಹಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ಗೃಹ ಸಚಿವಾಲಯ ಮತ್ತು ಸಂಸತ್ತಿನ ನಕಲಿ ಲಾಂಛನ ಇದ್ದ ಕಾರಿನ ಮೂಲಕ ಸಂಸತ್ ಭವನ ಪ್ರವೇಶಿಸಿದ್ದರು.

ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಸಂದರ್ಭವದು. ಇದೇ ಸಮಯದಲ್ಲಿ ವಿಧ್ವಂಸಕ ಕೃತ್ಯದ ಮೂಲಕ ಗಣ್ಯಾತಿಗಣ್ಯರನ್ನು ಕೊಲ್ಲುವುದು ಉಗ್ರರ ಕುತಂತ್ರವಾಗಿತ್ತು. ಭದ್ರತೆಯನ್ನು ಭೇದಿಸಿ ಉಪ ರಾಷ್ಟ್ರಪತಿ ಕೃಷ್ಣಕಾಂತ್ ಅವರ ಕಚೇರಿಯತ್ತ ಕಾರನ್ನು ನುಗ್ಗಿಸಿದ ಶಸ್ತ್ರಸಜ್ಜಿತ ಭಯೋತ್ಪಾದಕರು ಎಕೆ-47 ಬಂದೂಕುಗಳಿಂದ ಮನಬಂದಂತೆ ಗುಂಡು ಹಾರಿಸಿದ್ದರು. ಭಯೋತ್ಪಾದಕರ ದಾಳಿಯಲ್ಲಿ ದೆಹಲಿಯ ಆರು ಪೋಲೀಸರು, ಪಾರ್ಲಿಮೆಂಟ್‍ನ ಇಬ್ಬರು ಭದ್ರತಾಪಡೆ ಯೋಧರು ಮತ್ತು ತೋಟದ ಮಾಲಿಯನ್ನು ಕೊಂದಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪೋಲೀಸರು ಐವರು ಉಗ್ರರನ್ನು ಕೊಂದು ಹಾಕಿದ್ದರು.

ಈ ಘಟನೆ ನಡೆಯುವುದಕ್ಕೂ ಕೆಲವು ನಿಮಿಷಗಳ ಮುನ್ನ ಸಂಸತ್ತಿನ ಉಭಯ ಕಲಾಪಗಳನ್ನು ಮುಂದೂಡಲಾಗಿತ್ತು.ಉಪ ಪ್ರಧಾನಿ ಎಲ್.ಕೆ.ಅಡ್ವಾನಿ ಹಾಗೂ ವಿವಿಧ ಪಕ್ಷಗಳ 100ಕ್ಕೂ ಹೆಚ್ಚು ಮುಖಂಡರು ಸಂಸತ್ತಿನಲ್ಲೇ ಇದ್ದರು. ಈ ಪ್ರಕರಣದಲ್ಲಿ ಸೆರೆ ಸಿಕ್ಕಿದ ಜೈಷ್ ಸಂಘಟನೆ ಮುಖ್ಯಸ್ಥ ಅಫ್ಜಲ್ ಗುರುವನ್ನು ಫೆಬ್ರವರಿ 9, 2013ರಲ್ಲಿ ಗಲ್ಲಿಗೇರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ