ಬೆಂಗಳೂರು, ಡಿ.13-ರಾಜ್ಯದ ವಿವಿಧೆಡೆ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ, ಮಠ ಕಳೆದುಕೊಂಡಿರುವ ಸಂತ್ರಸ್ತರಿಗೆ ಒಂದು ವಾರದೊಳಗೆ ಕಡ್ಡಾಯವಾಗಿ ಪರಿಹಾರ ವಿತರಣೆಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅಪರ ಕಾರ್ಯದರ್ಶಿಗಳು , ಪ್ರಧಾನ ಕಾರ್ಯದರ್ಶಿಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಲವಾರು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದರೂ ಸಮರ್ಪಕವಾಗಿ ವಿತರಣೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ಪರಿಹಾರ, ಬೆಳೆ ನಾಶವಾಗಿದ್ದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ 10 ಸಾವಿರ ಪರಿಹಾರ ಘೋಷಣೆ ಮಾಡಿದ್ದೇವೆ. ಆದರೂ ಸಂತ್ರಸ್ತರಿಗೆ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಏನು ಕಾರಣ ಎಂದು ಏರುಧ್ವನಿಯಲ್ಲಿ ಹರಿಹಾಯ್ದರು.
ಈ ವೇಳೆ ಅಧಿಕಾರಿಗಳು ಕಾರಣಗಳನ್ನು ಹೇಳಲು ಮುಂದಾದಾಗ ನನ್ನ ಬಳಿ ಇನ್ನು ಇಂತಹ ಕಾರಣ ನೀಡಿದರೆ ಸಹಿಸುವುದಿಲ್ಲ. ಏನು ಮಾಡುತ್ತಿರೋ ಗೊತ್ತಿಲ್ಲ ಒಂದು ವಾರದೊಳಗೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗಬೇಕು. ಇಲ್ಲದಿದ್ದರೆ ಯಾವ ಮುಲಾಜಿಗೂ ಒಳಗಾಗದೆ ಕ್ರಮಕೈಗೊಳ್ಳುವುದಾಗಿ ಗುಡುಗಿದರು.
ಪ್ರವಾಹ ಉಂಟಾಗಿ ನಾಲ್ಕು ತಿಂಗಳಾಗಿದೆ. ನೀವು ಇನ್ನೂ ಸಬೂಬು ಹೇಳಿಕೊಂಡೇ ಸಮಯ ಕಳೆಯುತ್ತಿದ್ದೀರಿ. ಮನೆ ಕಳೆದುಕೊಂಡವರಿಗೆ ತಳಪಾಯ ಹಾಕಲು ಒಂದು ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಅವರು ಏಕೆ ಇನ್ನೂ ಮನೆ ಕಟ್ಟಿಕೊಳ್ಳಲು ಮುಂದಾಗಿಲ್ಲ. ಅವರ ಸಮಸ್ಯೆಗಳೇನು ಎಂಬುದನ್ನು ನನಗೆ ಪಟ್ಟಿ ಮಾಡಿಕೊಡಬೇಕು. ಆಧಾರ್ ಕಾರ್ಡ್ಗಳಿಲ್ಲದಿದ್ದರೆ ಚೆಕ್ ಮೂಲಕ ಪರಿಹಾರ ಕೊಡಿ ಎಂದು ಸೂಚಿಸಿದರು.
ನನಗೆ ತಿಳಿದಿರುವ ಮಾಹಿತಿ ಪ್ರಕಾರ ಶೇ.25ರಷ್ಟು ಮಂದಿ ತಳಪಾಯ ಹಾಕಿರುವವರು ಮನೆ ನಿರ್ಮಿಸಿಲ್ಲ. ಇದು ನಿಮ್ಮ ಉದಾಸೀನತೆಯನ್ನು ತೋರುತ್ತದೆ.
ಹಣಕಾಸಿನ ಇತಿಮಿತಿಯೊಳಗೆ ನಾವು ಸಮರ್ಪಕವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದೇವೆ. ಆದರೂ ಸಾರ್ವಜನಿಕರಲ್ಲಿ ಏಕೆ ಕೆಟ್ಟ ಅಭಿಪ್ರಾಯ ಇದೆ ಎಂದು ಪ್ರಶ್ನಿಸಿದರು.
ಬೆಳೆ ಪರಿಹಾರವೂ ಸಹ ಸಮರ್ಪಕವಾಗಿ ವಿತರಣೆಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಾಸ್ತವಿಕ ಪರಿಸ್ಥಿತಿ ಏನೆಂಬುದನ್ನು ತಿಳಿದುಕೊಂಡು ಎಲ್ಲಿ ಕೊರತೆಯಿದೆಯೋ ಅಲ್ಲಿ ಸರಿಪಡಿಸಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಬಿಗಿ ಆಡಳಿತ ತರಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ತಿಂಗಳು ಕಾರ್ಯದರ್ಶಿ ಮಟ್ಟದಲ್ಲಿ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಕಾರ್ಯದರ್ಶಿಗಳು ಹಳ್ಳಿಗಳಿಗೆ ಹೋಗಿ ತಿಂಗಳಿಗೆ ಒಂದು ಬಾರಿಯಾದರೂ ಅಲ್ಲಿನ ವಾಸ್ತವಿಕತೆಯನ್ನು ಅರಿಯಬೇಕು. ಯಾರೊಬ್ಬರು ಜಿಲ್ಲಾ ಪ್ರವಾಸವನ್ನೇ ಕೈಗೊಳ್ಳುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಸಭೆ ನಡೆಸಬೇಕು. ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ಮೊದಲು ನೀವು ಉದಾಸೀನತೆ ಬಿಟ್ಟು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಸರ್ಕಾರದಲ್ಲಿ ಉಂಟಾಗಿದ್ದ ಅಸ್ಥಿರತೆ ಮತ್ತು ಗೊಂದಲಗಳು ಸಂಪೂರ್ಣವಾಗಿ ನಿವಾರಣೆಯಾಗಿವೆ. ಇನ್ನು ಮುಂದಾದರೂ ಅಧಿಕಾರಿಗಳು ಜನರ ಬಳಿಗೆ ತೆರಳಿ ಅವರ ಕಷ್ಟಸುಖಗಳನ್ನು ಆಲಿಸಿ ಸರ್ಕಾರಕ್ಕೆ ಹೆಸರು ತರುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಉಂಟಾದ ಪ್ರವಾಹ ಮತ್ತು ಉಪಚುನಾವಣೆಯಿಂದಾಗಿ ಜನರಲ್ಲಿ ಸರ್ಕಾರದ ಬಗ್ಗೆ ಒಂದು ರೀತಿಯ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎಲ್ಲವೂ ಬಗೆಹರಿದಿವೆ. ಇನ್ನು ಮುಂದಾದರೂ ಅಧಿಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ಕೊಟ್ಟರು.
110 ವರ್ಷದ ಇತಿಹಾಸದಲ್ಲೇ ಕಂಡು ಕೇಳರಿಯದ ಪ್ರವಾಹ ಉಂಟಾಗಿ 8 ಲಕ್ಷ ಹೆಕ್ಟೇರ್ ಜಮೀನಿನ ಬೆಳೆ ನಾಶವಾಗಿದೆ. ಎರಡೂವರೆ ಲಕ್ಷ ಮನೆಗಳು ಕೊಚ್ಚಿ ಹೋಗಿವೆ. ಇಂತಹ ಅನೇಕ ಸಂಕಷ್ಟಗಳಿದ್ದರೂ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡಿದೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್.ಅಶ್ವಥ್ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ಭಾಸ್ಕರ್, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.