ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ರಾಜೀನಾಮೆ-ನಾಳೆ ಹೈಕಮಾಂಡ್ ತೀರ್ಮಾನ

ಬೆಂಗಳೂರು, ಡಿ.13- ಉಪ ಚುನಾವಣೆಯ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರುಗಳು ನೀಡಿರುವ ರಾಜೀನಾಮೆ ಕುರಿತು ನಾಳೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಬೇಕೆಂದು ಕಾಂಗ್ರೆಸ್‍ನ ಬಹುತೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್‍ಗುಂಡೂರಾವ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಭೇಟಿ ಮಾಡಿದ ಬಹಳಷ್ಟು ನಾಯಕರು ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದಿನೇಶ್‍ಗುಂಡೂರಾವ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ತೆರೆಮರೆಗೆ ಸರಿದಿದ್ದಾರೆ.

ದಿನೇಶ್‍ಗುಂಡೂರಾವ್ ಅವರಿಂದ ಪಕ್ಷ ಸಂಘಟನೆ ಸಾಧ್ಯವಾಗುತ್ತಿಲ್ಲ. ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನೂ ಮುನ್ನಡೆಸುತ್ತಿಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಾಗಿದೆ ಎಂದು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಳೆ ನವದೆಹಲಿಯಲ್ಲಿ ಭಾರತ್ ಬಚಾವೊ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ. ಅದರಲ್ಲಿ ಭಾಗವಹಿಸಲು ಕರ್ನಾಟಕದಿಂದ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡ ಅಭ್ಯರ್ಥಿಗಳು, ಕೆಪಿಸಿಸಿ, ಎಐಸಿಸಿ ಪದಾಧಿಕಾರಿಗಳು ತೆರಳುತ್ತಿದ್ದಾರೆ.

ರಾಜ್ಯದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಸಂಸದ ಡಿ.ಕೆ.ಸುರೇಶ್, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಅನೇಕ ನಾಯಕರು ದೆಹಲಿಗೆ ತೆರಳುತ್ತಿದ್ದು, ಭಾರತ್ ಬಚಾವೋ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.

ರ್ಯಾಲಿ ಇಡೀ ದಿನ ನಡೆಯುತ್ತಿದ್ದು, ರಾಮ್‍ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶಗೊಳ್ಳಲಿದೆ. ರಾಜ್ಯದಿಂದ ತೆರಳುವ ನಾಯಕರು ನಾಳೆ ಪ್ರತಿಭಟನೆಯ ಸ್ಥಳದಲ್ಲಿ ಹೈಕಮಾಂಡ್‍ನ ಪ್ರಮುಖರಾದ ಅಹಮ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್ ಅವರ ಜತೆ ಚರ್ಚೆ ನಡೆಸಲಿದ್ದಾರೆ.

ಸೋನಿಯಾಗಾಂಧಿ, ರಾಹುಲ್‍ಗಾಂಧಿ ಅವರ ಜತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆಸುವ ಸಾಧ್ಯತೆಗಳಿಲ್ಲ. ಸದ್ಯಕ್ಕೆ ಸೋನಿಯಾಗಾಂಧಿ ಅವರಿಗೆ ನೇರವಾಗಿ ವಿಷಯ ತಿಳಿಸುವ ಅಹಮ್ಮದ್ ಪಟೇಲ್ ಅವರ ಜತೆ ಮಾತುಕತೆ ನಡೆಸಲಿದ್ದು, ಕರ್ನಾಟಕ ಕಾಂಗ್ರೆಸ್‍ನಲ್ಲಿನ ಎರಡು ಪ್ರಮುಖ ಹುದ್ದೆಗಳ ಬಗ್ಗೆ ಸದ್ಯದಲ್ಲೇ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ.

ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇವರೆಡರಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರೆಸಲು ಹೈಕಮಾಂಡ್ ಮುಂದಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೂಕ್ತ ಎಂದು ಕೆಲ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ನಾಳೆ ನಡೆಯುವ ರ್ಯಾಲಿಯ ನಡುವೆ ರಾಜ್ಯ ರಾಜಕಾರಣದ ಕುರಿತು ಮಾತುಕತೆಗಳು ನಡೆಯಲಿದ್ದು, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ