ಸೋಮವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ಬೆಂಗಳೂರು, ಡಿ.11-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸೋಮವಾರ ನಡೆಯುವ ಸಾಧ್ಯತೆ ಇದ್ದು, 11 ಮಂದಿ ನೂತನ ಸಚಿವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಶನಿವಾರ ನವದೆಹಲಿಗೆ ತೆರಳಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲಿದ್ದಾರೆ.

ಸಂಸತ್ತಿನ ಅಧಿವೇಶನ ಮುಗಿದ ನಂತರ ತಮ್ಮನ್ನು ನವದೆಹಲಿಯಲ್ಲಿ ಭೇಟಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮಯ ನಿಗದಿಪಡಿಸಿದ್ದಾರೆ.

ಹೀಗಾಗಿ ಶನಿವಾರ ನವದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾದ ನಂತರ ಸೋಮವಾರ ಸಂಪುಟ ವಿಸ್ತರಣೆಯಾಗಲಿದ್ದು, ರಾಣೆಬೆನ್ನೂರು ಶಾಸಕ ಅರುಣ್ ಪೂಜಾರ್ ಹೊರತುಪಡಿಸಿ ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಶಾಸಕರೆಲ್ಲರೂ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಉಪಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಹಾಗೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೆ ಸರಿದ ಆರ್.ಶಂಕರ್ ಸದ್ಯ ಸಂಪುಟಕ್ಕೆ ಸೇರ್ಪಡೆಯಾಗುವ ಬಗ್ಗೆ ಇನ್ನೂ ಖಚಿತತೆ ಇಲ್ಲ.

ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ತಮ್ಮ ಜೊತೆಯೇ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು 11 ಶಾಸಕರು ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ಆದರೆ ತಕ್ಷಣವೇ ಇದು ಸಾಧ್ಯವಿಲ್ಲ. ಆದರೂ ಅವರಿಗೆ ನಾನು ಅನ್ಯಾಯ ಮಾಡುವುದಿಲ್ಲ ಎಂದು ಬಿಎಸ್‍ವೈ ಆಶ್ವಾಸನೆ ಕೊಟ್ಟಿದ್ದಾರೆ.

ಸಂಪುಟದಲ್ಲಿ ಸದ್ಯ 16 ಸ್ಥಾನಗಳು ಖಾಲಿ ಇದ್ದು, 11 ಮಂದಿ ಸಂಪುಟಕ್ಕೆ ಸೇರ್ಪಡೆಯಾದರೆ 5 ಸ್ಥಾನಗಳು ಮಾತ್ರ ಬಾಕಿ ಉಳಿಯಲಿವೆ. ಖಾಲಿ ಉಳಿಯಲಿರುವ ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರ್ಯಾರು ಸೇರ್ಪಡೆ: ಉಪಚುನಾವಣೆಯಲ್ಲಿ ಗೆದ್ದಿರುವ ರಮೇಶ್ ಜಾರಕಿ ಹೊಳಿ(ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಶ್ರೀಮಂತಪಾಟೀಲ್(ಕಾಗವಾಡ), ಬಿ.ಸಿ.ಪಾಟೀಲ್(ಹಿರೇಕೆರೂರು), ಆನಂದ್‍ಸಿಂಗ್(ವಿಜಯನಗರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಭೆರತಿ ಬಸವರಾಜ್(ಕೆ.ಆರ್.ಪುರಂ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ), ಶಿವರಾಂ ಹೆಬ್ಬಾರ್(ಯಲ್ಲಾಪುರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ) ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಈಗಾಗಲೇ ರಾಜಭವನಕ್ಕೂ ಸರ್ಕಾರದಿಂದ ಅಧಿಕೃತ ಮಾಹಿತಿ ರವಾನೆಯಾಗಿದ್ದು, ಭಾನುವಾರ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ