ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ರಾಜೀನಾಮೆ ಹಿನ್ನಲೆ- ಕಾಂಗ್ರೆಸ್ ಪಕ್ಷವೀಗ ಸಂಪೂರ್ಣ ಖಾಲಿ

ಬೆಂಗಳೂರು, ಡಿ.11-ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷವೀಗ ಸಂಪೂರ್ಣ ಖಾಲಿಯಾಗಿದೆ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದ ವೇಳೆ ಕೆಪಿಸಿಸಿ ಪದಾಧಿಕಾರಿಗಳಾಗಲು ಬಹಳಷ್ಟು ಮಂದಿ ನಾ ಮುಂದು ತಾ ಮುಂದು ಎಂದು ದುಂಬಾಲು ಬಿದ್ದಿದ್ದರು. ಪದಾಧಿಕಾರಿಗಳಾಗಿದ್ದವರಲ್ಲಿ ಬಹಳಷ್ಟು ಮಂದಿ ಯಾವುದೇ ಕೆಲಸ ಮಾಡದೆ ಹೆಸರಿಗಷ್ಟೆ ಪದಾಧಿಕಾರಿಗಳಾಗಿದ್ದರು. ಹೀಗಾಗಿ ಪಕ್ಷ ಸಂಘಟನೆ ಸಂಪೂರ್ಣ ಸೊರಗಿಹೋಗಿತ್ತು. ಕೆಪಿಸಿಸಿ ಅಧ್ಯಕ್ಷರು ಗಟ್ಟಿ ಧ್ವನಿಯಲ್ಲಿ ಹೇಳಿ ಕೆಲಸ ಮಾಡಿಸುವಂತಹ ಪರಿಸ್ಥಿತಿ ಇರಲಿಲ್ಲ. ಎಲ್ಲರೂ ಒಬ್ಬೊಬ್ಬ ಪ್ರಮುಖ ನಾಯಕರ ಹಿಂಬಾಲಕರಾಗಿದ್ದರು. ಹೀಗಾಗಿ ಸಾಕಷ್ಟು ಬದಲಾವಣೆ ತಂದು, ಹೊಸ ತಂಡ ಕಟ್ಟಲು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಹೊಸ ತಂಡ ರಚನೆ ಮಾಡುವ ಸಲುವಾಗಿಯೇ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳ ಸಮಿತಿಯನ್ನು ರದ್ದುಗೊಳಿಸಲಾಯಿತು.

ಹೊಸ ಪದಾಧಿಕಾರಿಗಳ ನೇಮಕಾತಿಯಲ್ಲೂ ಸಾಕಷ್ಟು ಅಡೆತಡೆಗಳು ಎದುರಾದವು. ಪಕ್ಷ ನಿಷ್ಠೆ, ಬದ್ಧತೆ ಮತ್ತು ಸಂಘಟನೆಗಾಗಿ ಸಮಯ ಮೀಸಲಿಡುವ ಸಮರ್ಥರನ್ನು ಆಯ್ದುಕೊಂಡು ಪದಾಧಿಕಾರಿಗಳನ್ನಾಗಿ ಮಾಡಿ ಪಕ್ಷ ಸಂಘಟಿಸಲು ಅಧ್ಯಕ್ಷ ದಿನೇಶ್‍ಗುಂಡೂರಾವ್ ನಿರ್ಧರಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಎಂದಿನಂತೆ ಪ್ರಮುಖ ನಾಯಕರ ಹಿಂಬಾಲಕರ ಲಾಬಿ ಆರಂಭವಾಯಿತು. ಈ ನಡುವೆ ಲೋಕಸಭೆ ಚುನಾವಣೆ ಎದುರಾಯಿತು. ಚುನಾವಣೆ ಮುಗಿದ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಂಡಿತು.

ಆವರೆಗೂ ಪದಾಧಿಕಾರಿಗಳಾಗಲು ದುಂಬಾಲು ಬಿದ್ದವರು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಪಕ್ಷದ ಕಚೇರಿಯತ್ತ ತಲೆ ಹಾಕುವುದನ್ನು ಬಿಟ್ಟರು. ಹೀಗಾಗಿ ಮತ್ತೆ ಪಕ್ಷ ನಿಷ್ಠೆ ಇರುವವರ ಹೊಸ ತಂಡ ಕಟ್ಟಲು ದಿನೇಶ್‍ಗುಂಡೂರಾವ್ ಪರದಾಡಬೇಕಾಯಿತು. ಪಟ್ಟಿ ಇನ್ನೇನು ಸಿದ್ಧಗೊಂಡಿದೆ, ಹೈಕಮಾಂಡ್ ಅಂಗೀಕಾರ ಪಡೆಯಬೇಕೆನ್ನುವ ವೇಳೆಯಲ್ಲಿ ಉಪಚುನಾವಣೆ ಘೋಷಣೆಯಾಯಿತು. ಪದಾಧಿಕಾರಿಗಳಿಲ್ಲದೆ ಲೋಕಸಭೆಯಂತೆ, ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಎದುರಿಸಿತ್ತು. ಅದಕ್ಕೆ ತಕ್ಕ ಫಲಿತಾಂಶವೂ ಬಂದಿದ್ದು, ಎರಡೂ ಚುನಾವಣೆಯಲ್ಲೂ ಕಾಂಗ್ರೆಸ್ ಧೂಳೀಪಟವಾಗಿದೆ.

ಮೊದಲೇ ಪದಾಧಿಕಾರಿಗಳಿರಲಿಲ್ಲ. ಈಗ ಉಪಚುನಾವಣೆ ಸೋಲಿನ ಕಾರಣಕ್ಕಾಗಿ ದಿನೇಶ್‍ಗುಂಡೂರಾವ್ ಕೂಡ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರೂ ಇಲ್ಲದೆ, ಪದಾಧಿಕಾರಿಗಳು ಇಲ್ಲದೆ ಪಕ್ಷ ಸಂಪೂರ್ಣ ಖಾಲಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ