ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಮೇಲ್ಮನೆಗೆ ಆಯ್ಕೆ

ಬೆಂಗಳೂರು, ಡಿ.11-ಉಪಚುನಾವಣೆಯಲ್ಲಿ ಪರಾಭವ ಗೊಂಡಿರುವ ಮಾಜಿ ಸಚಿವರಾದ ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಮೇಲ್ಮನೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಈ ಇಬ್ಬರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸ್ಪಷ್ಟಪಡಿಸಿರುವುದರಿಂದ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್‍ರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.

ಈ ಇಬ್ಬರಿಗೂ ಸ್ಥಾನ ಕಲ್ಪಿಸುವ ಸಂಬಂಧ ಹಾಲಿ ಮೇಲ್ಮನೆ ಸದಸ್ಯರಾಗಿರುವ ರವಿಕುಮಾರ್ ಮತ್ತು ತೇಜಸ್ವಿನಿ ರಮೇಶ್‍ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಇಬ್ಬರು ಸದಸ್ಯರ ಜೊತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಮೊದಲು ರಾಜೀನಾಮೆ ನೀಡಲು ಇಬ್ಬರು ಹಿಂದೇಟು ಹಾಕಿದರಾದರೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತ್ಯಾಗ ಮಾಡಲು ಸಮ್ಮತಿಸಿದ್ದಾರೆ.

ರವಿಕುಮಾರ್ ಮತ್ತು ತೇಜಸ್ವಿನಿ ರಾಜೀನಾಮೆ ನೀಡಿದರೆ ತೆರವಾಗಲಿರುವ ಈ ಎರಡೂ ಸ್ಥಾನಗಳಿಗೆ ಕ್ರಮವಾಗಿ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಮೇಲ್ಮನೆಗೆ ವಿಧಾನಸಭೆಯಿಂದ ಆಯ್ಕೆ ಮಾಡುವ ಹಾದಿ ಸುಗಮವಾಗುತ್ತದೆ.

ಈ ಮೊದಲು ಮೇಲ್ಮನೆ ಸದಸ್ಯರಾಗಿದ್ದ ರುದ್ರೇಗೌಡ ಮತ್ತು ಆಯನೂರು ಮಂಜುನಾಥ್ ಅವರುಗಳನ್ನು ರಾಜೀನಾಮೆ ಕೊಡಿಸಲು ಸಿಎಂ ಮುಂದಾಗಿದ್ದರು. ರುದ್ರೇಗೌಡ ವಿಧಾನಸಭೆಯಿಂದ ಆಯ್ಕೆಯಾಗಿದ್ದರೆ, ಆಯನೂರು ಮಂಜುನಾಥ್ ಸ್ಥಳೀಯ ಸಂಸ್ಥೆಯಿಂದ ಪರಿಷತ್‍ಗೆ ಆಯ್ಕೆಯಾದವರು.

ಹೀಗಾಗಿ ತಮ್ಮ ಬೆಂಬಲಿಗರಾಗಿರುವ ರವಿಕುಮಾರ್ ಮತ್ತು ತೇಜಸ್ವಿನಿ ಅವರಿಂದಲೇ ರಾಜೀನಾಮೆ ಕೊಡಿಸಿ ಚುನಾವಣೆಯಲ್ಲಿ ಪರಾಭವಗೊಂಡಿರುವ ವಿಶ್ವನಾಥ್ ಮತ್ತು ಎಂಟಿಬಿಗೆ ರಾಜಕೀಯ ಪುನರ್ಜನ್ಮ ಕೊಡಿಸಲು ಬಿಎಸ್‍ವೈ ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ