ಬೆಂಗಳೂರು,ಡಿ.9-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಿರ್ಣಾಯಕವಾಗಿದ್ದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ಇನ್ನಷ್ಟು ಗಟ್ಟಿಯಾಗಿದೆ.
ವಿಧಾನಸಭೆಯಲ್ಲಿ 105 ಸದಸ್ಯರನ್ನು ಹೊಂದಿದ್ದ ಬಿಜೆಪಿಗೆ ಸರಳ ಬಹುಮತಕ್ಕೆ 7 ಸ್ಥಾನಗಳನ್ನು ಗೆಲ್ಲಲೇಬೇಕಿತ್ತು. ಇದೀಗ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಕಮಲ ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಮುಂದಿನ ಮೂರುವರೆ ವರ್ಷಗಳ ಅವಧಿಗೆ ಯಡಿಯೂರಪ್ಪನವರ ಕುರ್ಚಿ ಮತ್ತು ಬಿಜೆಪಿ ಆಯಸ್ಸು ಸುಭದ್ರವಾಗಿದೆ.
ಗೋಕಾಕ್, ಅಥಣಿ, ಕಾಗವಾಡ, ರಾಣೆಬೆನ್ನೂರು, ಹಿರೇಕೆರೂರು, ವಿಜಯನಗರ, ಯಲ್ಲಾಪುರ, ಮಹಾಲಕ್ಷ್ಮಿಲೇಔಟ್, ಕೆ.ಆರ್.ಪುರಂ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಬಳಿಕ ಮುನ್ನಡೆ ಕಾಯ್ದುಕೊಂಡಿದ್ದು ತನ್ನ ಭದ್ರಕೋಟೆಯೆಂದು ಬೀಗುತ್ತಿದ್ದ ಜೆಡಿಎಸ್ಗೆ ಮರ್ಮಾಘಾತ ನೀಡಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿದೆ. ಜೆಡಿಎಸ್ನ ಭದ್ರಕೋಟೆ ಎಂದೇ ಹೇಳಲಾಗಿದ್ದ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ಕೆ.ಸಿ.ನಾರಾಯಣಗೌಡ ಗೆಲುವು ಸಾಧಿಸಿ ದಳಪತಿಗಳಿಗೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ.
ಹುಣಸೂರಿನಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಪರಾಭವಗೊಂಡಿದ್ದರೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಪಿ.ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಮೇಲ್ನೋಟಕ್ಕೆ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗದಿದ್ದರೂ ಇದೀಗ ಬಿಜೆಪಿಯೇ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾರಣ ಸರ್ಕಾರಕ್ಕೆ ಎದುರಾಗಿದ್ದ ಸಂಖ್ಯಾಬಲದ ಕೊರತೆಯಿಂದ ದೂರವಾಗಿ ಸ್ಥಿರ ಆಡಳಿತ ನೀಡಲು ಸಜ್ಜಾಗಿದೆ.
ಫಲಿತಾಂಶದಲ್ಲಿ ಕೊಂಚ ಏರುಪೇರಾದರೂ ತಮ್ಮ ಕುರ್ಚಿಗೆ ಕಂಟಕ ವಾಗಬಹುದೆಂಬುದನ್ನು ಮೊದಲೇ ಅರಿತಿದ್ದ ಬಿಎಸ್ವೈ ಅಭ್ಯರ್ಥಿಗಳ ಗೆಲುವಿಗೆ ಪಣತೊಟ್ಟಿದ್ದರು.
ಅನೇಕ ಕ್ಷೇತ್ರಗಳಿಗೆ ಅಭಿವೃದ್ದಿ ನೆಪದಲ್ಲಿ ನೂರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮತದಾರರ ಮೂಗಿಗೆ ತುಪ್ಪ ಸವರಿದ್ದರು. ಅಲ್ಲದೆ ಸರ್ಕಾರ ಮತ್ತು ಪಕ್ಷದೊಳಗೆ ಎಷ್ಟೇ ವ್ಯತ್ಯಾಸಗಳಿದ್ದರೂ ಚುನಾವಣಾ ಸಂದರ್ಭದಲ್ಲಿ ಎಲ್ಲಾ ನಾಯಕರು ಪ್ರದರ್ಶಿಸಿದ್ದು ಕೂಡ ಗೆಲುವಿಗೆ ಕಾರಣವಾಗಿದೆ.
ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಸಚಿವರು, ಶಾಸಕರು, ಪದಾಧಿಕಾರಿಗಳು, ಕೇಂದ್ರ ಸಚಿವರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದರು.
ಪರಿಣಾಮ ಬಿಜೆಪಿ ಸ್ಪಷ್ಟ ಜನಾದೇಶ ಪಡೆದಿದೆ. ಇದೀಗ ಮುಖ್ಯಮಂತ್ರಿ ಮುಂದೆ ಹಲವು ಸವಾಲುಗಳು ಎದುರಾಗಿದ್ದು, ಜನತೆಯ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಬೇಕಾಗಿದೆ.