ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಡಿ.9- ನಮ್ಮ ಪಕ್ಷಕ್ಕೆ ಬಂದು ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.

ಫಲಿತಾಂಶ ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ನಾವು ಯಾವ ಭರವಸೆಯನ್ನು ಕೊಟ್ಟಿದ್ದೆವೊ ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗೆದ್ದ ಎಲ್ಲರಿಗೂ ವಾಗ್ದಾನದಂತೆ ಮಂತ್ರಿ ಸ್ಥಾನ ನೀಡಲಾಗುವುದು. ಈ ಬಗ್ಗೆ ಯಾರಿಗೂ ಯಾವ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ನಮ್ಮ ಪಕ್ಷವನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಕೊಟ್ಟ ಮಾತಿನಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳಿ ವರಿಷ್ಠರ ಬಳಿ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ಮಾಡಿದ ಬಳಿಕ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.

ನಾನು ವಿರೋಧ ಪಕ್ಷದ ನಾಯಕರ ಬಗ್ಗೆ ಯಾವುದೇ ರೀತಿಯ ಟೀಕೆ, ಟಿಪ್ಪಣಿ ಮಾಡುವುದಿಲ್ಲ. ರಾಜೀನಾಮೆ ನೀಡಿದವರನ್ನು ಅನರ್ಹರು ಎಂದು ಅನಗತ್ಯವಾಗಿ ಕೆಲವು ಟೀಕೆ ಮಾಡಿದರು. ಆದರೆ ಜನತಾ ನ್ಯಾಯಾಲಯದಲ್ಲಿ ಅವರೆಲ್ಲರೂ ಅರ್ಹರಾಗಿದ್ದಾರೆ. ಇನ್ನು ಮುಂದಾದರೂ ಇಂತಹ ಟೀಕೆಗಳು ಬೇಡ ಎಂದು ಮನವಿ ಮಾಡಿದರು.

ಮುಂದಿನ ಮೂರುವರೆ ವರ್ಷಗಳ ಅವಧಿಗೆ ರಾಜ್ಯವನ್ನು ಸಂಪೂರ್ಣವಾಗಿ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ತೀರ್ಮಾನಿಸಿದ್ದೇನೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳು ಕೈಬಿಡಬೇಕು. ರಾಜ್ಯದ ಅಭಿವೃದ್ದಿಯಲ್ಲಿ ನೀವು ಕೂಡ ಕೈಜೋಡಿಸಿ ಎಂದು ಕೋರಿದರು.

ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ