ಬೆಂಗಳೂರು,ಡಿ.9-ರಾಜ್ಯದ ಜನತೆಯನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಸ್ಪಷ್ಟ ಬಹುಮತ ಪಡೆದಿದ್ದು, ಪ್ರತಿಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.
ಸದ್ಯ ಬಿಜೆಪಿ 117 ಸದಸ್ಯರ ಬಲ ಹೊಂದಿದ್ದು, ವಿಧಾನಸಭೆಯಲ್ಲಿ ಸರಳ ಬಹುಮತ ಪಡೆದಿದೆ. ಇದರೊಂದಿಗೆ ಮುಂದಿನ ಮೂರುವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪನವರ ಕುರ್ಚಿಯೂ ಗಟ್ಟಿಯಾಗಿದೆ.
ಫಲಿತಾಂಶದಲ್ಲಿ ಕೊಂಚ ಏರುಪೇರಾದರೆ ಮತ್ತೆ ಮರುಮೈತ್ರಿ ಮಾಡಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಹಳೆ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ಗೆ ಉಪಚುನಾವಣೆ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿದೆ.
ಏಕೆಂದರೆ ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ 12, ಜೆಡಿಎಸ್ 3 ಕ್ಷೇತ್ರಗಳು ಸೇರಿದ್ದವು. ಹುಣಸೂರು, ಶಿವಾಜಿನಗರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದರೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ.
ನ್ಯಾಯಾಲಯ ಮತ್ತು ಪ್ರತಿಪಕ್ಷದವರಿಂದ ಅನರ್ಹತೆಯ ಹಣೆಪಟ್ಟಿ ಅಂಟಿಸಿಕೊಂಡಿದ್ದರೂ ಜನತಾ ನ್ಯಾಯಾಲಯದಲ್ಲಿ ಈಗ ಶಾಸಕರು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
15 ಕ್ಷೇತ್ರಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಹೊಸಕೋಟೆಯಲ್ಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಸಹೋದರರ ಜಿದ್ದಾಜಿದ್ದಿನಿಂದ ರಾಜ್ಯದ ಗಮನಸೆಳೆದಿದ್ದ ಕುಂದಾನಗರಿ ಬೆಳಗಾವಿಯ ಗೋಕಾಕ್ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದಾರೆ.
ಪಕ್ಕದ ಅಥಣಿಯಲ್ಲೂ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹಾಗೂ ಸಮಬಲದ ಸ್ಪರ್ಧೆ ನೀಡಬಹುದೆಂದು ನಿರೀಕ್ಷಿಸಿದ್ದ ಕಾಗವಾಡದಲ್ಲೂ ಶ್ರೀಮಂತ ಪಾಟೀಲ್ ಗೆಲ್ಲುವುದರೊಂದಿಗೆ ಬೆಳಗಾವಿಯ ಮೂರು ಕ್ಷೇತ್ರಗಳು ಬಿಜೆಪಿ ಪಾಲಾಗಿದೆ.
ಅಥಣಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಮಹೇಶ್ ಕುಮಟಳ್ಳಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.
ಕೊನೆ ಕ್ಷಣದಲ್ಲಿ ಫಲಿತಾಂಶ ಏರುಪೇರಾಗಬಹುದೆಂದು ಕಾಗವಾಡದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ಪ್ರಚಾರ ಕೈ ಹಿಡಿದಿದೆ.
ನಿರೀಕ್ಷೆಯಂತೆ ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ ಭಾರೀ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿ ಕಾಂಗ್ರೆಸ್ನ ಬಿ.ಎಚ್.ಬನಿಕೋಡ್ ಅವರನ್ನು ಪರಾಭವಗೊಳಿಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಅಚ್ಚರಿ ಎಂಬಂತೆ ಬಿಜೆಪಿಯ ಅರುಣ್ಪೂಜಾರ್, ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ನ ಹಳೇ ಹುಲಿ ಕೆ.ಬಿ.ಕೋಳಿವಾಡಗೆ ಸೋಲಿನ ರುಚಿ ತೋರಿಸಿದ್ದಾರೆ.
ವಿಜಯನಗರದಲ್ಲೂ ಬಿಜೆಪಿಯ ಆನಂದ್ಸಿಂಗ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಮೊದಲ ಬಾರಿಗೆ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಸ್ಪರ್ಧೆಯೊಡ್ಡಬಹುದೆಂದು ನಿರೀಕ್ಷಿಸಲಾಗಿದ್ದ ಕಾಂಗ್ರೆಸ್ನ ಅಂಜನಪ್ಪ ಮತ್ತು ಜೆಡಿಎಸ್ನ ರಾಧಾಕೃಷ್ಣ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ.
ರಾಜಧಾನಿ ಬೆಂಗಳೂರಿನ ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್, ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ.
ಭೆರತಿ ಬಸವರಾಜ್, ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸುವು ಮೂಲಕ ರಾಜಧಾನಿ ಬೆಂಗಳೂರು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ವಿಜಯದ ನಗೆ ಬೀರಿದ್ದಾರೆ. ಯಶವಂತಪುರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಮೊದಲ ಬಾರಿ ಗೆಲುವು ಕಂಡಿದ್ದರೆ ಭಾರೀ ಪೈಪೋಟಿ ನೀಡಬಹುದೆಂದು ಊಹಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಸರವಣ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಜೆಡಿಎಸ್ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಸಕ್ಕರೆ ನಾಡು ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿದೆ. ಕೆ.ಸಿ.ನಾರಾಯಣಗೌಡ ಜೆಡಿಎಸ್ನ ತೀವ್ರ ಪೈಪೋಟಿ ನಡುವೆಯೂ ಗೆಲುವು ಸಾಧಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ನ ಎಚ್.ಪಿ.ಮಂಜುನಾಥ್ ಅವರು ಭಾರೀ ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಂತೆ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂಬುದು ಇಂದಿನ ಫಲಿತಾಂಶದಿಂದ ಸಾಬೀತಾಗಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಮೊದಲ ಸ್ಥಾನ ನೀಡಿದ್ದವು.