ಉಪಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ

ಬೆಂಗಳೂರು, ಡಿ.9-ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ.

ಕಳೆದ ವಿಧಾನಸಭೆಯಲ್ಲಿ ಜಯಗಳಿಸಿದ್ದ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಹೀಗಾಗಿ ಈ ಮೂರೂ ಕ್ಷೇತ್ರಗಳನ್ನು ಜೆಡಿಎಸ್ ಕಳೆದುಕೊಂಡಂತಾಗಿದೆ.

ಹದಿನೈದು ಅನರ್ಹ ಶಾಸಕರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ನಡೆಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಗಳ ಸಾಧನೆ ಭಾರೀ ನಿರಾಸೆಯುಂಟು ಮಾಡಿದೆ.

ಮತ ಎಣಿಕೆ ಆರಂಭದಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಮುನ್ನಡೆಯಲ್ಲಿದ್ದರು.

ನಂತರ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಪರಾಭವಗೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಅದೇ ರೀತಿ ಯಶವಂತಪುರದಲ್ಲೂ ಜವರಾಯಿಗೌಡ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ವಿರುದ್ಧ ಪರಾಭವಗೊಂಡರು.
ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿಲೇಔಟ್, ಹುಣಸೂರು ಹಾಗೂ ಗೋಕಾಕ್ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳು ತೀರಾ ಕಳಪೆ ಸಾಧನೆ ಮಾಡಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕನಿಷ್ಠ 5 ರಿಂದ 6 ಕ್ಷೇತ್ರಗಳಲ್ಲಿ ಜಯಗಳಿಸುವ ನಿರೀಕ್ಷೆಯನ್ನು ಜೆಡಿಎಸ್ ಹೊಂದಿತ್ತು. ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಬೆಂಬಲ ಘೋಷಣೆ ಮಾಡಿತ್ತು.

ಅಥಣಿ ಮತ್ತು ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದು ಕಣದಿಂದ ಹಿಂದೆ ಸರಿದಿದ್ದರು. ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಉಜನಪ್ಪ ಜಟ್ಟಪ್ಪ ಕೋಡಿಹಳ್ಳಿಗೆ ಜೆಡಿಎಸ್ ಬೆಂಬಲ ಘೋಷಿಸಿತ್ತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ಪಕ್ಷದ ಮುಖಂಡರು ಯಶವಂತಪುರ, ಮಹಾಲಕ್ಷ್ಮಿಲೇಔಟ್, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ರೈತರ ಸಾಲ ಮನ್ನಾ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ಮತಯಾಚನೆ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ