ಬೆಂಗಳೂರು: ಲೋಕಸಭೆಯಲ್ಲಿ ಸೋಮವಾರ ‘ಪೌರತ್ವ (ತಿದ್ದುಪಡಿ) ಮಸೂದೆ’ ಅಂಗೀಕಾರಗೊಂಡಿದೆ. ಈ ಕುರಿತು ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವುದು ಸಂವಿಧಾನ ವಿರೋಧಿ ನಡೆ ಎಂದು ಬಣ್ಣಿಸಿದ್ದಾರೆ.
ಅವಸರದಿಂದ ಮಧ್ಯರಾತ್ರಿ ಲೋಕಸಭೆ ಅಂಗೀಕರಿಸಿದ ‘ಪೌರತ್ವ (ತಿದ್ದುಪಡಿ) ಮಸೂದೆ’ ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಜಾತ್ಯತೀತತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಮಸೂದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವುದು ಸಂವಿಧಾನ ವಿರೋಧಿ ನಡೆ. ಈ ಮಸೂದೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಹತ್ತಿಕ್ಕುವ ದುರುದ್ದೇಶ ಇದೆಯೇ ಹೊರತು ವಲಸೆ ಸಮಸ್ಯೆಯನ್ನು ಪರಿಹರಿಸುವ ಸದುದ್ದೇಶ ಖಂಡಿತ ಇಲ್ಲ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಮೂಲಕ ದ್ವಿರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದ್ದ ಬಿಜೆಪಿಯ ಮೂಲಪುರುಷರ ಆಶಯವನ್ನು ಕೇಂದ್ರ ಸರ್ಕಾರ ಈಡೇರಿಸಲು ಹೊರಟಿರುವುದು ಸ್ಪಷ್ಟವಾಗಿದೆ. ದೇಶ ಒಡೆಯಲು ಹೊರಟಿರುವ ಬಿಜೆಪಿ ಸಂಚಿನ ವಿರುದ್ದ ಜಾತ್ಯತೀತ ಭಾರತ ಸಂಘಟಿತವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.